ಮೂಡುಬಿದಿರೆ: ನಿಡ್ಡೋಡಿಯಲ್ಲಿ ಆರಂಭವಾಗಿರುವ 440 ಕೆವಿ ವಿದ್ಯುತ್ ತಂತಿ ಲೈನ್, ಟವರ್ ಕಾಮಗಾರಿ ಮತ್ತು ಅದಕ್ಕೆ ಎದುರಾಗಿರುವ ಆಕ್ಷೇಪದ ಕುರಿತು ಗಮನ ಹರಿಸುವಂತೆ ರಾಜ್ಯ ಇಂಧನ ಇಲಾಖೆಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಕಚೇರಿಯಿಂದ ಸೂಚನೆ ನೀಡಲಾಗಿದೆ. ವಿಷಯಕ್ಕೆ ಸಂಬಂಧಿಸಿ ಪುತ್ತೂರಿನ ಡಾ. ಎಸ್. ಎನ್. ಅಮೃತಮಲ್ಲ ಎಂಬವರು ಮುಖ್ಯಮಂತ್ರಿಯವರಿಗೆ ಇ-ಮೇಲ್ ಮಾಡಿದ್ದರು. ಇದನ್ನು ಪರಿಗಣಿಸಿ, ಸಿಎಂ ಕಚೇರಿ ಇಂಧನ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ನಿಡ್ಡೋಡಿಯಲ್ಲಿ ಟವರ್ ನಿರ್ಮಿಸದಂತೆ ಜಿಲ್ಲಾಧಿಕಾರಿಯವರು ಆದೇಶ ಮಾಡಬೇಕು. ಕೃಷಿಭೂಮಿ, ಅರಣ್ಯ ಪ್ರದೇಶ ಸಂರಕ್ಷಿಸಿ ಯಾವುದೇ ಅನುಮತಿ ಇಲ್ಲದೆ ಟವರ್ ನಿರ್ಮಾಣ ನ್ಯಾಯಾಂಗ ನಿಂದನೆ ಆಗುತ್ತದೆ. ಸ್ಥಳ ತನಿಖೆ ಮಾಡಿ ಸ್ಥಳೀಯರ ಆಕ್ಷೇಪಕ್ಕೆ ಬೆಂಬಲಿಸುವುದು ಸರ್ಕಾರದ ಕರ್ತವ್ಯ ಆಗಿದೆ ಎಂದು ಅವರು ಇಮೇಲ್‌ನಲ್ಲಿ ತಿಳಿಸಿದ್ದರು. ಮುಖ್ಯಮಂತ್ರಿಯವರ ಕಚೇರಿಯಿಂದ ಈ ಪತ್ರವನ್ನು ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಕಳುಹಿಸಿಕೊಡಲಾಗಿದೆ.
ಪಡುಬಿದ್ರಿಯಿಂದ ಕಾಸರಗೋಡುವಿಗೆ ವಿದ್ಯುತ್ ರವಾನಿಸುವ ವಿದ್ಯುತ್ ತಂತಿ ಲೈನ್‌ಗೆ ನಿಡ್ಡೋಡಿ ಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.