ಪಾಟ್ನಾ: ಕೇಂದ್ರದಲ್ಲಿ ಮುಂದಿನ ಸರ್ಕಾರ ಯಾವ ಮೈತ್ರಿಕೂಟದ್ದು ನಿರ್ಮಾಣವಾಗುತ್ತದೆ ಎಂಬ ಅನುಮಾನಗಳ ನಡುವೆ, ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ ಯುನೈಟೆಡ್ ನಾಯಕ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್ ದೆಹಲಿಗೆ ಒಂದೇ ವಿಮಾನದಲ್ಲಿ ತೆರಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿರುವ ನಿತೀಶ್ ಕುಮಾರ್ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿರುವ ತೇಜಸ್ವಿ ಯಾದವ್ ಇಂದು ಮುಂಜಾನೆ 10:30ರ ವಿಸ್ತಾರ ವಿಮಾನದಲ್ಲಿ ಒಟ್ಟಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ. ವಿಮಾನದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಅಭಿನಂದಿಸಿದ್ದಾರೆ.
ಮೈತ್ರಿಕೂಟ ರಚಿಸಿಕೊಂಡು ಸರ್ಕಾರ ರಚಿಸಿದ್ದ ಇಬ್ಬರೂ ಕೆಲವು ತಿಂಗಳ ಹಿಂದೆಯಷ್ಟೇ ಬೇರೆ ಬೇರೆಯಾಗಿದ್ದರು. ನಂತರ ನಿತೀಶ್ ಕುಮಾರ್ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದರು. ನಿನ್ನೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದ ನಡುವೆ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗಾಗಿ ನಿತೀಶ್ ಓಲೈಸಲಿದ್ದಾರೆ ಎಂಬ ವ್ಯಾಪಕ ವರದಿಗಳಾಗಿದ್ದವು. ಅವರಿಗೆ ಉಪಪ್ರಧಾನಿ ಸ್ಥಾನದ ಆಫರ್ ಕೂಡ ನೀಡಲಾಗಿದೆ ಎನ್ನಲಾಗಿತ್ತು. ಬಿಜೆಪಿ ಮುಖಂಡರೂ ನಿತೀಶ್ ಅವರನ್ನು ಭೇಟಿಯಾಗಿದ್ದರು. ಆದರೆ ನಾವು ಎನ್‌ಡಿಎ ಜೊತೆ ಉಳಿಯಲಿದ್ದೇವೆ ಎಂದು ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ಸ್ಪಷ್ಟಪಡಿಸಿದ್ದರು.