ನಿಟ್ಟೆ: ನಿಟ್ಟೆ ಪರಿಗಣೆತ ವಿಶ್ವವಿದ್ಯಾಲಯದ ಅಧೀನ ಸಂಸ್ಥೆ ಡಾ. ನಿಟ್ಟೆ ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜು ಹಾಗೂ ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಜಾಗತಿಕ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ – 2024 ಡಿಸೆಂಬರ್ 28ರಂದು ಜಸ್ಟೀಸ್ ಕೆ. ಎಸ್. ಹೆಗ್ಡೆ ಉದ್ಯಮಾಡಳಿತ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪೂರ್ವ ವಿದ್ಯಾರ್ಥಿಗಳು ಕಲಿತ ಸಂಸ್ಥೆಯ ಜೊತೆ ನಿಕಟ ಸಂಬಂಧವಿರಿಸಿಕೊಂಡು ವರ್ಷದಲ್ಲಿ ಕನಿಷ್ಠ ಒಮ್ಮೆಯಾದರೂ ಭೇಟಿ ನೀಡುವ ಜೊತೆಯಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಪ್ರಸನ್ನ ಆರ್. ಕೈಲಾಜೆ ಹಿರಿಯ ವಿದ್ಯಾರ್ಥಿ ಸಂಘಟನೆಯ ಬಗ್ಗೆ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 21 ಪೂರ್ವ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಿಟ್ಟೆ ವಿದ್ಯಾಸಂಸ್ಥೆಯ ಮಾರ್ಗದರ್ಶಕರು, ಕರ್ನಾಟಕ ವಿಧಾನಪರಿಷತ್ ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಹಾಗೂ ಹಳೆ ವಿದ್ಯಾರ್ಥಿಗಳ ಸಂಘಟನೆಗಳ ನಿರ್ದೇಶಕರಾಗಿರುವ ಪ್ರಸನ್ನ ಆರ್. ಕೈಲಾಜೆ ಉಪಸ್ಥಿತರಿದ್ದರು.
ಈ ಹಿಂದೆ ಕಾರ್ಯ ನಿರ್ವಹಿಸಿರುವ ಉಪನ್ಯಾಸಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿಶ್ವದೆಲ್ಲೆಡೆ ನೆಲೆಸಿರುವ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದ ಬಳಿಕ ಹಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಸ್ನೇಹ ಮಿಲನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಮನೋರಂಜನಾ ಕ್ರೀಡೆಗಳು ನಡೆದವು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ದರ್ವಿಶ್ ಮಮ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ವೀಣಾ ಬಿ.ಕೆ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಹಾಯಕ ಗ್ರಂಥಪಾಲಕ ಸತೀಶ್ ಶೆಟ್ಟಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸಭೆಗೆ ಪರಿಚಯಿಸಿದರು. ಪೂರ್ವ ವಿದ್ಯಾರ್ಥಿನಿ ಅನುರಾಧಾ ಭಟ್ ಪ್ರಾರ್ಥಿಸಿದರು. ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ನೂತನ ನಿರ್ದೇಶಕ ಡಾ. ಸುಧೀರ್ ಎಂ. ವಂದಿಸಿದರು. ಚೈತ್ರಾ ಕುಡ್ವ ನಿರೂಪಿಸಿದರು. ಸುಚರಿತ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಗೈದರು. ಉಪನ್ಯಾಸಕರಾದ ಡಾ. ದಯಾನಂದ ಬಾಯಾರ್, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾದ ಅರ್ಚನಾ ಭಟ್ ಹಾಗೂ ಇತರರು ಸಹಕರಿಸಿದರು.
ಇದೇ ಸಂದರ್ಭದಲ್ಲಿ 2024-25 ರಿಂದ 2025-26ರ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನೂತನ ಅಧ್ಯಕ್ಷೆಯಾಗಿ ಚೈತ್ರಾ ಕುಡ್ವ, ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್, ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ, ಖಜಾಂಚಿಯಾಗಿ ಅರ್ಚನಾ ಭಟ್ ಹಾಗೂ 9 ಮಂದಿಯನ್ನೊಳಗೊಂಡ ಕಾರ್ಯಕಾರಿ ಸಮಿತಿ ಆಯ್ಕೆಗೊಂಡರು.