ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ನಿರ್ಧಾರ
ಮಾರ್ಚ್ 22 ರಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಸಂಘಟನೆಗಳು ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮತ್ತು ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸಂತೋಷ್ ಕುಮಾರ್, ಬಂದ್ ಚಾಲಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವಂತಿದೆ. ಬೆಂಗಳೂರಿನಲ್ಲಿ 75 ಸಾವಿರಕ್ಕೂ ಅಧಿಕ ಆಟೋಗಳು ಸಂಚರಿಸುತ್ತಿವೆ. 2.5 ಲಕ್ಷಕ್ಕೂ ಅಧಿಕ ಕುಟುಂಬಗಳು ಚಾಲಕ ವೃತ್ತಿಯನ್ನು ಅವಲಂಬಿಸಿದ್ದು, ಬಂದ್ ನಿಂದ ಇವರ ಬದಕು ದುಸ್ತರವಾಗಲಿದೆ. ಔಷಧ, ತರಕಾರಿ, ಹಾಲು, ಅಗತ್ಯ ವಸ್ತುಗಳ ಸಾಗಾಣೆ, ಶಾಲಾ ವಾಹನಗಳು ಸೇವೆ ಸ್ಥಗಿತಗೊಳಿಸಿದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8 ಸಾವಿರಕ್ಕೂ ಅಧಿಕ ವಾಹನಗಳು ಸೇವೆ ನೀಡುತ್ತಿವೆ. ಸಿಟಿ ಟ್ಯಾಕ್ಸಿ, ಓಲಾ, ಊಬರ್, ರಾಜ್ಯದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಆದರೆ ಚಾಲಕರು ಬೆಲೆ ಏರಿಕೆಯಿಂದಾಗಿ ತೊಂದರೆಯಲ್ಲಿದ್ದಾರೆ. ಇಎಂಐ, ವಾಹನ ವಿಮೆ ಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಾಜ್ಯ ಬಜೆಟ್ ನಲ್ಲೂ ಚಾಲಕ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಹೇಳಿದರು.
ಆದರೆ ಬಂದ್ ಗೆ ಸಂಘದ ಪದಾಧಿಕಾರಿಗಳು ಬೆಂಬಲ ನೀಡಲಿದ್ದು, ನಾವೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಆದರೆ ಚಾಲಕ ಸಮುದಾಯ ಬಂದ್ ಅನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು