ಮುಂಬೈ: ಮುಂಬೈ ಪ್ರವೇಶಿಸುವ ಎಲ್ಲಾ 5 ಟೋಲ್‌ಗಳಲ್ಲಿ ಲಘು ವಾಹನಗಳಿಗೆ ಟೋಲ್ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಘೋಷಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಈ ನಿರ್ಧಾರ ಜಾರಿಯಾಗಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರ ರಾಜ್ಯ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಸಿಎಂ ಏಕನಾಥ ಶಿಂಧೆ ಈ ಬ್ಗಗೆ ಪ್ರಕಟಿಸಿದ್ದಾರೆ. ಕಾರು, ಜೀಪು, ಮಿನಿ ಗೂಡ್ಸ್ ವಾಹನಗಳು ಲಘು ವಾಹನಗಳ ಅಡಿಯಲ್ಲಿ ಬರುತ್ತವೆ. ಸರ್ಕಾರದ ಈ ನಿರ್ಧಾರದಿಂದ 2.8 ಲಕ್ಷ ಲಘು ವಾಹನಗಳ ಮಾಲಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ನಿತ್ಯ ಕಚೇರಿಗೆ ಕಾರಿನಲ್ಲಿ ಪ್ರಯಾಣಿಸುವ ವ್ಯಕ್ತಿ ದಿನಕ್ಕೆ 45 ರೂ. ಟೋಲ್ ಪಾವತಿಸುತ್ತಾನೆ. ವಾರದಲ್ಲಿ ಐದು ದಿನ ಸಂಚಾರ ಎಂದು ಲೆಕ್ಕ ಹಾಕಿದರೆ, ಆತನಿಗೆ ವಾರಕ್ಕೆ 225 ರೂ, ವರ್ಷಕ್ಕೆ 11,700 ರೂ. ಉಳಿತಾಯವಾಗುತ್ತದೆ. ಇತರೆ ಲಘು ಮೋಟಾರು ವಾಹನ ಚಾಲಕರಿಗೆ 75 ರೂ., ವಾರಕ್ಕೆ 375 ರೂ. ಮತ್ತು ವರ್ಷಕ್ಕೆ 19,500 ಉಳಿತಾಯವಾದಂತಾಗುತ್ತದೆ ಎಂದು ಲೆಕ್ಕಹಾಕಲಾಗಿದೆ.