ಶಿಮ್ಲಾ: ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿರುವ ನಟಿ ಕಂಗನಾ ರಣಾವತ್ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿ ಜ್ಯೋತ್ಸ್ನಾ ರೇವಾಲ್ ಅವರು ಆ.21ರೊಳಗೆ ಉತ್ತರ ನೀಡುವಂತೆ ಸಂಸದೆ ಕಂಗನಾಗೆ ಸೂಚಿಸಿದ್ದಾರೆ.
ಬಿಜೆಪಿ ಸಂಸದೆ ವಿರುದ್ಧ ಕಿನ್ನೌರ್ ನಿವಾಸಿ ಲಾಯಿಕ್ ರಾಮ್ ನೇಗಿ ಎಂಬವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಂಗನಾ ಆಯ್ಕೆ ರದ್ದುಗೊಳಿಸುವಂತೆ ಕೋರ್ಟ್‌ಗೆ ಮನವಿ ಅವರು ಮಾಡಿದ್ದಾರೆ. ಮಂಡಿ ಕ್ಷೇತ್ರದಿಂದ ನಾನು ಕೂಡ ಸ್ಪರ್ಧಿಸಲು ಬಯಸಿದ್ದೆ. ಆದರೆ ನನ್ನ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಪ್ಪಾಗಿ ತಿರಸ್ಕರಿಸಿದ್ದರು. ನನ್ನ ನಾಮಪತ್ರವನ್ನು ಸರಿಯಾಗಿ ಪರಿಶೀಲಿಸಿ ಅಂಗೀಕರಿಸಿದ್ದರೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರನ್ನು ಕಂಗನಾ 74,755 ಮತಗಳಿಂದ ಸೋಲಿಸಿದ್ದರು. ಸಿಂಗ್ 4,62,267 ಮತಗಳನ್ನು ಪಡೆದಿದ್ದರು. ಕಂಗನಾ ರಣಾವತ್ 5,37,002 ಮತಗಳನ್ನು ಪಡೆದಿದ್ದರು.