ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳಗಂಗೋತ್ರಿ ʻಕನಕ ಜಯಂತಿ ಪ್ರಯುಕ್ತʼ 2024-25ನೇ ಸಾಲಿನ ಶೈಕ್ಷಣಿಕ ವರ್ಷದ `ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮವು ಧರ್ಮನಿಧಿ ಯೋಗಪೀಠ, ಮಾನವಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವಮಂಗಳ ಪದವಿಪೂರ್ವ ಕಾಲೇಜು, ಕೊಣಾಜೆ ಇವರ ಸಹಯೋಗದೊಂದಿಗೆ 21 ನವೆಂಬರ್ 2024 ಗುರುವಾರ ಪೂರ್ವಾಹ್ನ 10.00 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಸಭಾಂಗಣದಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರಿನ ಪ್ರಸಿದ್ಧ ಗಾಯಕರು, ಸಂಗೀತ ಕಲಾರತ್ನ ಡಾ. ವಿದ್ಯಾಭೂಷಣ ಇವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಸನ್ಮಾನ್ಯ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ವಹಿಸಲಿರುವರು. ಕುಲಸಚಿವರಾದ ಶ್ರೀ ಕೆ. ರಾಜು ಮೊಗವೀರ ಕೆ.ಎ.ಎಸ್. ಶುಭಾಶಂಸನೆ ನೀಡಲಿರುವರು, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟು ಸದಸ್ಯರು, ಕನಕದಾಸ ಸಂಶೋಧನ ಕೇಂದ್ರದ ಸಲಹಾ ಸಮಿತಿ ಸದಸ್ಯರು ಶ್ರೀ ರಘುರಾಜ್ ಕದ್ರಿ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣ ಹೊಂಗಳ್ಳಿ, ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರುವರು. ಉದ್ಘಾಟನಾ ಸಮಾರಂಭದ ಬಳಿಕ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಅಧ್ಯಾಪಕ, ಅಧ್ಯಾಪಕೇತರ ಮತ್ತು ಸಾರ್ವಜನಿಕ ಮಟ್ಟದಲ್ಲಿ ಕನಕದಾಸರ ಕೀರ್ತನೆಗಳ ʻಸಮೂಹ ಗಾಯನʼ ಕಾರ್ಯಕ್ರಮವು ನಡೆಯಲಿದೆ ಎಂದು ಕನಕದಾಸ ಸಂಶೋಧನ ಕೇಂದ್ರ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.