ಕೊಣಾಜೆ: ಊರೂರು ಸುತ್ತಾಡಿ, ಮನೆಮನೆಗೆ ಹೋಗಿ ತಾಡವೋಲೆ, ಹಸ್ತಪ್ರತಿಗಳನ್ನು ಸಂಗ್ರಹಿಸಿ ವಚನಗಳನ್ನು ಸಂಪಾದಿಸಿಕೊಟ್ಟ ಫ.ಗು ಹಳಕಟ್ಟಿಯವರ ಆಸಕ್ತಿ ಧೃಡತೆ, ಪರಿಶ್ರಮ ಹಾಗೂ ಕನ್ನಡಾಭಿಮಾನ ಸಙಶೋಧಕರಿಗೆ ಮಾದರಿ ಎಂದು ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಯ ಅಧ್ಯಕ್ಷ ಡಾ.ಸೋಮಣ್ಣ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಡಾ. ಫ.ಗು ಹಳಕಟ್ಟಿ ಜನ್ಮ ದಿನಾಚರಣೆ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನದಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ನಾಗಪ್ಪ ಗೌಡ ಮಾತನಾಡಿ ಕನ್ನಡದ ವೈಚಾರಿಕ ಅಸ್ಮಿತೆಯ ಪ್ರತೀಕವಾಗಿರುವ, ಮಾನವಧರ್ಮವನ್ನು ಬೋಧಿಸಿದ ವಚನ ಸಾಹಿತ್ಯವನ್ನು ನಮಗೆ ಉಳಿಸಿಕೊಟ್ಟವರು ಹಳಕಟ್ಟಿಯವರು.ಬಡತನವಿದ್ದರೂ ಸವಾಲುಗಳನ್ನು ಎದುರಿಸಿ ‘ವಚನಶಾಸ್ತ್ರಸಾರ’ದ ಸಂಪುಟಗಳನ್ನು ಪ್ರಕಟಿಸಿದರು.
ಅವುಗಳನ್ನು ಪ್ರಕಟಿಸಲು ಮುದ್ರಕರು ಸಿಗದೇ ಇದ್ದಾಗ ಸ್ವಂತ ಮನೆಯನ್ನೇ ಮಾರಿ ಅದರಿಂದ ಬಂದ ಹಣದಿಂದ ಮುದ್ರಣಾಲಯವನ್ನು ಸ್ಥಾಪಿಸಿದರು. ಅವರ ತ್ಯಾಗ ಹೋರಾಟಗಳಿಂದ ಕನ್ನಡದ ಅಪೂರ್ವ ಚಳವಳಿಯೊಂದು ಶಾಶ್ವತವಾಗಿ ಉಳಿಯುವಂತಾಯಿತು ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ.ಧನಂಜಯ ಕುಂಬ್ಳೆ ಮಾತನಾಡಿ ಮಧ್ಯಕಾಲದ ಕನ್ನಡ ಸಾಹಿತ್ಯದ ಕುರಿತ ಸಂಶೋಧನೆ, ಗ್ರಂಥ ಸಂಪಾದನೆಯಲ್ಲಿ ಹಳಕಟ್ಟಿಯವರ ಕೊಡುಗೆ ಅಪೂರ್ವ. ವಚನ ಮತ್ತು ರಗಳೆಗಳ ಸಂಗ್ರಹ,ಸಂಪಾದನೆ ಮತ್ತು ಪ್ರಕಟಣೆಯನ್ನು ಮಾಡಿ ಕನ್ನಡಕ್ಕೆ ಮಹದುಪಕಾರ ಮಾಡಿದ್ದಾರೆ. ವಚನ ಸಾಹಿತ್ಯ ಪ್ರಸಾರಕ್ಕೆ ತಾವೇ ಶಿವಾನುಭವ, ನವಕರ್ನಾಟಕ ದಂತಹ ಪತ್ರಿಕೆಗಳನ್ನು ಆರಂಭಿಸಿ ಪತ್ರಿಕೋದ್ಯಮ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಸಮಾರಂಭದಲ್ಲಿ ಡಾ.ಯಶುಕುಮಾರ್, ಚಂದ್ರಶೇಖರ ಎಂ.ಬಿ, ಉಪನ್ಯಾಸಕರು, ವಿವಿಧ ಪೀಠಗಳ ಸಂಶೋಧನ ಸಹಾಯಕರು, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.