ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದಾಗ ಆಕ್ಷೇಪಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಜೊತೆಗೆ ವಾಗ್ವಾದ ಮತ್ತು ಘರ್ಷಣೆ ನಗರದ ಕಪಿತಾನಿಯೋ ಮತದಾನ ಕೇಂದ್ರದ ಬಳಿ ನಡೆಯಿತು. ಉದ್ರಿಕ್ತ ಕಾರ್ಯಕರ್ತರನ್ನು ಬಳಿಕ ಪೊಲೀಸರು ಚದುರಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಅವರ ಹೇಳಿಕೆ ಪಡೆಯಲು ಮುಂದಾದರು. ಆಗ ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು ಎಂದು ಸಂದೀಪ್ ಎಕ್ಕೂರು ಎಂಬಾತ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವೇಳೆ ಪೊಲೀಸರು ಆತನನ್ನು ಅಲ್ಲಿಂದ ದೂರ ಕರೆದುಕೊಂಡು ಹೋಗಲು ಯತ್ನಿಸಿದರು. ಈ ವೇಳೆ ಆತನೊಂದಿಗಿದ್ದವರು ಆತನನ್ನು ಸಮಾಧಾನ ಮಾಡಲು ಯತ್ನಿಸಿದರೂ ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆತನನ್ನು ಪೊಲೀಸರು ಒಂದಷ್ಟು ದೂರ ತಳ್ಳಿಕೊಂಡು ಹೋಗಿದ್ದರೆ. ಬಳಳಿಕ ಪೊಲೀಸ್ ಅಧಿಕಾರಿಯೊಬ್ಬರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪೊಲೀಸರು ಅಲ್ಲಿಂದ ಹೋದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದದ ಮಾಧ್ಯಮ ಸಿಬ್ಬಂದಿ ಮೇಲೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಕೊಂಚ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.