ಮೂಡುಬಿದಿರೆ: ಲಯನ್ಸ್ ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಮತ್ತು ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಅವರು ಜ. 31ರಂದು ಅಧಿಕೃತ ಭೇಟಿ ನೀಡಿದರು.
ನಂತರ ಲಯನ್ಸ್ ಪಾರ್ಕ್‌ನ ಹರಿಭವ ಸಭಾಭವನದಲ್ಲಿ ಕ್ಲಬ್ ಅಧ್ಯಕ್ಷ ಬೊನವೆಂಚರ್ ಮಿನೇಜಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕ್ಲಬ್ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು.
ನಿರಂತರವಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಾಜಿ ಅಧ್ಯಕ್ಷ ರುಕ್ಕಯ್ಯ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಲ್ಲಬೆಟ್ಟುವಿನ ಕ್ಲಾರಾ ಡಿಸೋಜ ಅವರ ಮನೆ ನಿರ್ಮಾಣಕ್ಕೆ ಕ್ಲಬ್ ಅಧ್ಯಕ್ಷ ಬೊನವೆಂಚರ್ ಮಿನೇಜಸ್ ಮತ್ತು ನಿಕಟಪೂರ್ವ ಅಧ್ಯಕ್ಷ ಜೊಸ್ಸಿ ಮಿನೇಜಸ್ ಅವರು ನೀಡಿರುವ ತಲಾ ರೂ. 10 ಸಾವಿರ ದೇಣಿಗೆಯನ್ನು ಉಚಿತ ಮನೆ ನಿರ್ಮಾಣದ ರೂವಾರಿ ಅನಿಲ್ ರೂಬನ್ ಮೆಂಡೋನ್ಸಾ ಅವರಿಗೆ ಹಸ್ತಾಂತರಿಸಲಾಯಿತು. ಅನಾರೋಗ್ಯ ಪೀಡಿತರಾಗಿರುವ ವೆಂಕಪ್ಪ ಪರವ ಮತ್ತು ಬಾಲಕ ಶಿರೀಶ್ ಅವರ ಚಿಕಿತ್ಸೆಗೆ ತಲಾ ರೂ. 10 ಸಾವಿರ ಸಹಾಯಧನ, ಕಥೊಲಿಕ್ ಸಬವಾ ಮೂಡುಬಿದಿರೆ ಘಟಕದ 30ನೇ ವಾರ್ಷಿಕೋತ್ಸವಕ್ಕೆ ರೂ. 10 ಸಾವಿರ, ಕಿಲೆಂಜಾರು ಶಾಲೆಯ ಪೀಠೋಪಕರಣ ಖರೀದಿಗೆ ರೂ. 10 ಸಾವಿರವನ್ನು ಕ್ಲಬ್ ಅಧ್ಯಕ್ಷ ಬೊನವೆಂಚರ್ ಮಿನೇಜಸ್ ನೀಡಿದ್ದು ಕ್ಲಬ್ ವತಿಯಿಂದ ಈ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಮತ್ತು ಪ್ರತಿಭಾ ಹೆಬ್ಬಾರ್ ದಂಪತಿಗಳನ್ನು ಹಾಗೂ ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕ್ಲಬ್ ಸದಸ್ಯರಾಗಿದ್ದು ಸಾಧನೆ ಮಾಡಿರುವ ಅರ್ಥಶಾಸ್ತ್ರ ಸಂಘದ ಅಧ್ಯಕ್ಷ ದಯಾನಂದ, ಕರ್ನಾಟಕ ಕಲಾ ಭೂಷಣ 2025 ಪ್ರಶಸ್ತಿ ಪುರಸ್ಕೃತ ಅನಿಲ್ ರೂಬನ್ ಮೆಂಡೋನ್ಸಾ, ಮಾಜಿ ಶಾಸಕ ಸೋಮಪ್ಪ ಸುವರ್ಣ ಸ್ಮಾರಕ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಆಂಡ್ರ್ಯೂ ಡಿಸೋಜ, ಎಂ.ಸಿ.ಎಸ್. ಬ್ಯಾಂಕ್ ಪ್ರಶಸ್ತಿಗೆ ಭಾಜನರಾಗಿರುವ ಕಲ್ಸಂಕ ವೆಂಕಟೇಶ ಪ್ರಭು ಮತ್ತು ಜೊಸ್ಸಿ ಮಿನೇಜಸ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಮೂಡುಬಿದಿರೆ ಕ್ಲಬ್ ಹಮ್ಮಿಕೊಳ್ಳುತ್ತಿರುವ ಸೇವಾ ಕಾರ್ಯಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತಾ ಹಿರಿಯ ಸದಸ್ಯರು ಮತ್ತು ಮಧ್ಯ ವಯಸ್ಕ ಸದಸ್ಯರು ಅನ್ಯೋನ್ಯತೆಯಿಂದ ಸೇರಿಕೊಂಡು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುವ ಜೊತೆಗೆ ಕಿರಿಯರನ್ನೂ ಲಿಯೋ ಕ್ಕಬ್ ಮುಖಾಂತರ ಸೇವಾ ವ್ಯಾಪ್ತಿಗೆ ಸೇರಿಸಿಕೊಂಡು ಪ್ರೇರಣಾದಾಯಕ ಕಾರ್ಯ ನಡೆಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರಲ್ಲದೆ ಪ್ರಾಂತ್ಯದಲ್ಲಿ ಈ ಬಾರಿ 2 ಹೊಸ ಕ್ಲಬ್‌ಗಳನ್ನು ಸ್ಥಾಪನೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.
ವಲಯಾಧ್ಯಕ್ಷ ಉಮೇಶ್ ಶೆಟ್ಟಿಯವರು ಮಾತನಾಡಿ ಲಯನ್ಸ್ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು. ವಸಂತ ಶೆಟ್ಟಿ ಶ್ರದ್ಧಾ ಮತ್ತು ರಾಯನ್ ರೋಶನ್ ಡಿಸೋಜ ಶುಭಾಶಂಸನೆ ಗೈದರು. ಪ್ರಾಂತ್ಯದ ಪ್ರಥಮ ಮಹಿಳೆ ಪ್ರತಿಭಾ ಹೆಬ್ಬಾರ್, ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಜೊಸ್ಸಿ ಮಿನೇಜಸ್, ವಲಯ ಪ್ರತಿನಿಧಿ ಮೆಲ್ವಿನ್ ಸಲ್ದಾನಾ, ಕ್ಲಬ್ ಕಾರ್ಯದರ್ಶಿ ವಿನೋದ್ ಡೇಸಾ, ಖಜಾಂಚಿ ಪ್ರಶಾಂತ್ ಶೆಟ್ಟೆ, ಪ್ರಾಂತ್ಯ ವ್ಯಾಪ್ತಿಯ ವಿವಿಧ ಕ್ಲಬ್‌ಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಯಮಿ ಸೈಮನ್ ಅರಾನ್ಹಾ ಅವರನ್ನು ಹೊಸ ಸದಸ್ಯಾರಾಗಿ ಕ್ಲಬ್‌ಗೆ ಸೇರ್ಪಡೆ ಮಾಡಲಾಯಿತು. ಆಂಡ್ರ್ಯೂ ಡಿಸೋಜ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಿದರು. ಆಲ್ವಿನ್ ಮಿನೇಜಸ್ ಪ್ರಾಂತೀಯ ಅಧ್ಯಕ್ಷರನ್ನು ಮತ್ತು ಮಾರ್ಕ್ ಮೆಂಡೋನ್ಸಾ ವಲಯಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ವಲೇರಿಯನ್ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿದರು.
ಅಧ್ಯಕ್ಷ ಬೊನವೆಂಚರ್ ಮಿನೇಜಸ್ ಸ್ವಾಗತಿಸಿದರು. ಜಾನ್ ರೇಗೋ ಧ್ವಜವಂದನೆ ನಡೆಸಿಕೊಟ್ಟರು. ದಯಾನಂದ ನೀತಿ ಸಂಹಿತೆ ಪಠಿಸಿದರು. ಶಿವಪ್ರಸಾದ್ ಹೆಗ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿನೋದ್ ಡೇಸಾ ವರದಿ ವಾಚಿಸಿ ಧನ್ಯವಾದ ಸಮರ್ಪಿಸಿದರು.
ಮೂಡುಬಿದಿರೆ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಮತ್ತು ವಲಯಾಧ್ಯಕ್ಷರ ಅಧಿಕೃತ ಭೇಟಿ
RELATED ARTICLES