ಸುಳ್ಯ: ಉತ್ತರ ಪ್ರದೇಶ, ಬಿಹಾರದಲ್ಲಿ ಇಂತಹ ಘಟನೆಗಳ ಬಗ್ಗೆ ಕೇಳುತ್ತಿದ್ದೆವು. ಆದರೆ ಈಗ ನಮ್ಮ ಜಿಲ್ಲೆಯಲ್ಲೇ ಇಂತಹುದೊಂದು ಘಟನೆ ವರದಿಯಾಗಿದೆ. ರಸ್ತೆ ಸಂಪರ್ಕ ಸರಿ ಇಲ್ಲದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರನ್ನು ಕುರ್ಚಿಯಲ್ಲಿ ಕೂರಿಸಿ ಗ್ರಾಮಸ್ಥರು ಹೊತ್ತುಕೊಂಡು ತಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ಮಡಪ್ಪಾಡಿ ಗ್ರಾಮ ನಡುಬೆಟ್ಟು ಎಂಬಲ್ಲಿ ನಡೆದಿದೆ.
ನಡುಬೆಟ್ಟು ಗ್ರಾಮದಲ್ಲಿ ಹದಿನಾಲ್ಕು ಮನೆಗಳಿವೆ. ಗ್ರಾಮವನ್ನು ಸಂಪರ್ಕಿಸಲು ಕಚ್ಚಾ ರಸ್ತೆ ಇದ್ದು, ವಾಹನ ಸಂಚರಿಸಲು ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆ ಹದಗೆಟ್ಟಿದೆ. ಬಾಡಿಗೆ ವಾಹನದವರು ಬರಲು ಒಪ್ಪದ ಕಾರಣ, ಸುಳ್ಯ ಪೇಟೆಯಲ್ಲಿರುವ ಆಸ್ಪತ್ರೆಗೆ ದಾಖಲಿಸಲು ವೃದ್ಧರನ್ನು ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ದಾಖಲಿಸಲು ಈ ರೀತಿ ಹೊತ್ತುಕೊಂಡು ಹೋಗುವುದು ಸಾಮಾನ್ಯವಾಗಿದೆ.
ರಸ್ತೆಯಲ್ಲಿ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಬೇಸಿಗೆಯಲ್ಲೂ ಫೋರ್ ವ್ಹೀಲ್ ಜೀಪ್ ಮತ್ತು ಪಿಕಪ್ ಮಾತ್ರ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಮಳೆಗಾಲದ ಸ್ಥಿತಿ ಇನ್ನಷ್ಟು ಸಂಕಷ್ಟ. ಗ್ರಾಮಸ್ಥರು ಕೃಷಿ ಉತ್ಪನ್ನ ಮತ್ತು ಮನೆಗೆ ಬೇಕಾದ ದಿನಸಿಯನ್ನು ಹೊತ್ತುಕೊಂಡು ತರಬೇಕಿದೆ. ಗ್ರಾಮದ ಕೆಲವರ ಬಳಿ ದ್ವಿಚಕ್ರ ವಾಹನಗಳಿದ್ದರೂ ರಸ್ತೆ ಸರಿ ಇಲ್ಲದ ಕಾರಣ ಅದನ್ನು 2 ಕಿಮೀ ದೂರದ ಬೇರೆಯವರ ಮನೆಯಂಗಳದಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಬೇಕಿದೆ. ಜನಪ್ರತಿನಿಧಿಗಳು ಚುನಾವಣಾ ಸಮಯದಲ್ಲಿ ಭರವಸೆ ನೀಡಿ ಹೋಗುತ್ತಾರೆ. ನಮ್ಮ ಸಮಸ್ಯೆ ಕೇಳುವವರಿಲ್ಲ. ಅಧಿಕಾರಿಗಳು, ಜಿಲ್ಲಾಡಳಿತ ನಮ್ಮ ಸಮಸ್ಯೆಗೆ ಸ್ಪಂದಿಸಿ, ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.