ಕೋಝಿಕ್ಕೋಡ್: ಮೆದುಳು ತಿನ್ನುವ ಅಮೀಬಾ ಎಂಬ ಅಪರೂಪದ ಮಿದುಳು ಸೋಂಕಿನಿಂದ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ವರದಿಯಾಗಿದೆ. ಚಿಕ್ಕ ಕೊಳವೊಂದರಲ್ಲಿ ಈಜಾಡಿದ ನಂತರ ಬಾಲಕನಿಗೆ ಸೋಂಕು ತಗುಲಿತ್ತು ಎಂದು ಆರೋಗ್ಯ ಮೂಲಗಳು ತಿಳಿಸಿವೆ.
ಅಪರೂಪದ ಮೆದುಳು ತಿನ್ನುವ ಅಮೀಬಾದಿಂದಾಗಿ ಸಾವನ್ನಪ್ಪಿದ ಮೂರನೇ ಘಟನೆ ಇದಾಗಿದೆ. ಮೇ 21ರಂದು ಮಲಪ್ಪುರಂನ ಐದು ವರ್ಷದ ಪುಟ್ಟ ಬಾಲಕಿ ಈ ಸೋಂಕಿನಿಂದ ಮೃತಪಟ್ಟಿದ್ದಳು. ಜೂ. 25ರಂದು ಕಣ್ಣೂರಿನ 13 ವರ್ಷದ ಬಾಲಕಿ ಇದೇ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಳು. ಈಗ ಇದು ಮೂರನೇ ಘಟನೆಯಾಗಿದೆ.
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ನೆಗ್ಲೇರಿಯಾ ಫೌಲೆರಿಯಿಂದ ಇದು ಜನ್ಮ ತಳೆಯುತ್ತದೆ. ಇದು ಸರೋವರ, ನದಿಗಳಂತಹ ಸಿಹಿನೀರಿನ ಮೂಲಗಳಲ್ಲಿ ಕಂಡುಬರುವ ಸೂಕ್ಷ್ಮ ಜೀವಿಯಾಗಿದೆ. ನೀರಿನಲ್ಲಿ ಈಜಾಡಿದಾಗ, ಆಡಿದಾಗ ಮೂಗಿನ ಮೂಲಕ ಇದು ದೇಹವನ್ನು ಪ್ರವೇಶಿಸುತ್ತದೆ ಮತ್ತು ಮೆದುಳಿಗೆ ಹೋಗಿ ಅಲ್ಲಿ ಮೆದುಳನ್ನು ತಿನ್ನಲು ಪ್ರಾರಂಭಿಸುತ್ತದೆ. ಇದು ಸಾವಿಗೂ ಕಾರಣವಾಗಬಹುದು ಎನ್ನಲಾಗಿದೆ.