ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರ ಅಶ್ಲೀಲ ವಿಡಿಯೋಗಳನ್ನಿರಿಸಿಕೊಂಡಿದ್ದ ಆರೋಪ ಕೇಳಿಬಂದ ಬಳಿಕ ವಿದೇಶಕ್ಕೆ ತೆರಳಿರುವ ಹಾಸನ ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿ, ಜೀವ ಬೆದರಿಕೆಯೊಡ್ಡಲಾಗಿದೆ ಎಂಬ ಆರೋಪದ ದೂರು ದಾಖಲಾಗಿದೆ. ಮನೆ ಕೆಲಸದ ಮಹಿಳೆ ಮತ್ತು ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ವಿರುದ್ಧ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಅದೇ ದೂರು ಆಧರಿಸಿ ಎಸ್ ಐಟಿ ತನಿಖೆ ಆರಂಭಗೊಂಡಿದೆ.
ಈ ನಡುವೆ ಮತ್ತೊಬ್ಬ ಮಹಿಳೆ ದೂರು ನೀಡಿದ್ದು, ಈ ದೂರನ್ನೂ ಎಸ್ ಐಟಿ ತನಿಖೆಗೆ ಕೈಗೆತ್ತಿಕೊಳ್ಳಲಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ. ಪರಮೇಶ್ವರ್, ಮತ್ತೊಬ್ಬ ಮಹಿಳೆ ದೂರು ನೀಡಿದ್ದಾರೆ. ಇದು ಎರಡನೇ ದೂರು. ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಬಹುದು. ತಮಗೆ ಸರ್ಕಾರ ಎಲ್ಲಾ ರೀತಿಯ ಭದ್ರತೆ ಒದಗಿಸಲಿದೆ ಎಂದು ತಿಳಿಸಿದರು.