ಮಂಗಳೂರು: ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಇಎನ್ ಕ್ರೈಂ ಪೊಲೀಸರು ಕೇರಳದ ತ್ರಿಶೂರು ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.
ನಿಧಿನ್ ಕುಮಾರ್ ಕೆ.ಎಸ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಶೇರು ಮಾರುಕಟ್ಟೆಯ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯುವ ಭರವಸೆ ನೀಡಿ ದೂರುದಾರರಿಗೆ 10.32 ಲಕ್ಷ ರೂಪಾಯಿ ವಂಚಿಸಿದ್ದಾನೆ.
ಹಲವು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಕಮಿಷನ್ ಆಧಾರದ ಮೇಲೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು. ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮತ್ತು ಇತರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.