ಬೆಳ್ತಂಗಡಿ : “ನಮ್ಮ ಪ್ರಧಾನಿಗ್ ತುಳುವೆರೆ ಪೋಸ್ಟ್ ಕಾರ್ಡ್” ಅಭಿಯಾನÀವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಿ ಪ್ರದೇಶವಾದ ಬಂಜಾರು ಮಲೆಯ ತುಳುನಾಡಿನ ಮೂಲ ಜನಾಂಗದ ಆದಿವಾಸಿಗಳು ವಾಸಿಸುವಂತಹ ಪ್ರದೇಶದಲ್ಲಿ ಚಾಲನೆ ನೀಡಲಾಯಿತು.


ಇಂದು ದಿ.೦೧.೦೯.೨೦೨೨ ರಂದು ಪ್ರಾರಂಭವಾದ ಈ ಅಭಿಯಾನ ಇಂದಿನಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದು ಸುಮಾರು ೧ ಲಕ್ಷಕ್ಕೂ ಮೀರಿದ ಪೋಸ್ಟ್ ಕಾರ್ಡ್ನ್ನು ತುಳು ಭಾಷೆಯ ಮಾನ್ಯತೆಗಾಗಿ ಮಾನ್ಯ ಪ್ರಧಾನಿ ಯವರಿಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಈ ಅಭಿಯಾನಕ್ಕೆ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲವನ್ನು ಕೋರುತ್ತಿದೆ.


ಮೂಲ ಜನಾಂಗದ ಪ್ರದೇಶವಾದ ಬಂಜಾರು ಮಲೆಯಿಂದ ಸಾಂಕೇತಿಕವಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಬಂಜಾರು ಮಲೆಯ ಮೂಲಜನಾಂಗದವರು ತುಳು ಭಾಷೆಯ ಮಾನ್ಯತೆಗಾಗಿ ನಡೆಯುವ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು. ನಮ್ಮ ಮಾತೃ ಭಾಷೆಯಾದ ತುಳುವಿಗೆ ಸರಕಾರದಿಂದ ಮಾನ್ಯತೆ ದೊರಕಬೇಕು ಎಂದು ತಿಳಿಸಿ ಎಲ್ಲಾ ಮನೆಗಳಿಂದ ಪೋಸ್ಟ್ ಕಾರ್ಡ್ ಬರೆಯುವ ಮುಖಾಂತರ ಈ ಅಭಿಯಾನಕ್ಕೆ ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ಬೆಳ್ತಂಗಡಿಯಲ್ಲಿ ತುಳುವೆರೆ ಪಕ್ಷದಿಂದ ಸಂಪೂರ್ಣ ಬೆಂಬಲ ದೊರೆತಿದ್ದು, ಕಾರ್ಯಕ್ರಮದಲ್ಲಿ ತುಳುವೆರ್ ಕುಡ್ಲ(ರಿ) ಸಂಘಟನೆಯ ಅಧ್ಯಕ್ಷರಾದ ಪ್ರತೀಕ್ ಯು. ಪೂಜಾರಿ, ಉಪಾಧ್ಯಕ್ಷರಾದ ಸಂತೋಷ್ ಮತ್ತು ಸದಸ್ಯರಾದ ಪ್ರಜ್ವಲ್, ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾದ ಪೂಜಾ ಶೆಟ್ಟಿ, ಸದಸ್ಯರಾದ ನಿಕ್ಷಿತಾ, ತುಳುನಾಡು ವಾರ್ತೆ ವಾರ ಪತ್ರಿಕೆಯ ಸಂಪಾದಕರಾದ ಪುನೀತ್, ಮತ್ತು ತುಳುವೆರ್ ಪಕ್ಷದ ಅಧ್ಯಕ್ಷ ಶೈಲೇಶ್ ಆರ್. ಜೆ. ಉದ್ಘಾಟಿಸುವ ಮೂಲಕ ಅಭಿಯಾನಕ್ಕೆ ಚಾಲನೆ ದೊರೆಯಿತು. ಸಮಾಜ ಸೇವಕ ಪ್ರವೀಣ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.