ಮಂಗಳೂರು: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನ್ಯಾಯವಾದಿ, ಮಾಜಿ ಕೇಂದ್ರಸಚಿವ ಬಿ.ಜನಾರ್ದನ ಪೂಜಾರಿಯವರ ಶಿಷ್ಯ ಪದ್ಮರಾಜ್ ಆರ್. ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಸದಾ ಹಸನ್ಮುಖಿ, ಸರಳ ಸಜ್ಜನಿಕೆ ವ್ಯಕ್ತಿತ್ವದ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಪದ್ಮರಾಜ್ ಆರ್. ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಿದ್ದಾರೆ. ಮೂಡಿಗೆರೆಯ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿರುವ ಇವರು, ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿಯೇ ಪೂರೈಸಿ ಬಿ.ಎ ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. ಬಳಿಕ ನ್ಯಾಯವಾದಿಯಾಗಿ ನಾಲ್ಕು ವರ್ಷಗಳ ಕಾಲ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ವೃತ್ತಿ ಬದುಕು ಪ್ರಾರಂಭಿಸುವ ಅವಕಾಶ ದೊರೆಯಿತು. ಬಳಿಕ ಬಳ್ಳಾಲ್‌ಬಾಗ್‌ಲ್ಲಿ ಸ್ವಂತ ಕಚೇರಿ ಪ್ರಾರಂಭಿಸಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸಂದರ್ಭ ದಿನಂಪ್ರತಿ ಕುದ್ರೋಳಿ ದೇವಸ್ಥಾನದ ಪ್ರತಿಯಿಂದ ಸುಮಾರು 1,000 ಮಂದಿ ಬಡವರು, ನಿರಾಶ್ರಿತರು, ವಲಸೆ ಕಾರ್ಮಿಕರಿಗೆ ಅನ್ನದಾನ ಮಾಡಿದ್ದಾರೆ. ಈ ನಡುವೆ ಗುರುಬೆಳದಿಂಗಳು ಎಂಬ ಸಂಸ್ಥೆ ಕಟ್ಟಿಕೊಂಡು ಒಂದಷ್ಟು ಯುವಕರನ್ನು ಜೊತೆ ಸೇರಿಸಿಕೊಂಡು ನೊಂದವರಿಗೆ ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಮದುವೆ, ನೂರಾರು ರೋಗಿಗಳಗೆ ಔಷಧಕ್ಕೆ ನೆರವು, ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿ ಲಕ್ಷಾಂತರ ರೂಪಾಯಿ ಸಹಾಯಹಸ್ತ ನೀಡಿದ್ದಾರೆ. ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಪದ್ಮರಾಜ್ ಅವರು ಸದಾ ಕ್ರಿಯಾಶೀಲರಾಗಿದ್ದಾರೆ.