ಪಡುಬಿದ್ರಿ: ಕುಡಿಯಲು ನೀರು ಕೇಳುವ ನೆಪದಲ್ಲಿ ಎಲ್ಲೂರು ಗ್ರಾಮದ ದಳಂತ್ರ ಕೆರೆ ಸಮೀಪದ ಕೃಷ್ಣರಾಜ ಹೆಗಡೆ ಅವರ ಮನೆಗೆ ಎ.12ರಂದು ಸಂಜೆ ಬಂದ ಪಾಲಡ್ಕ ನಿವಾಸಿ ಶರತ್ ಎಂಬಾತನು ಮನೆ ಮಾಲಕಿಯ ಆಭರಣ ದೋಚಲು ಯತ್ನಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಇದೇ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ಸಂಜೆ ಮನೆಗೆ ಬಂದು ಕುಡಿಯಲು ನೀರು ಕೇಳಿದ್ದ. ಮನೆ ಮಾಲಕಿ ಸುನೀತಿ ಹೆಗಡೆ ನೀರು ತರಲು ಒಳಗೆ ಹೋದಾಗ ಆರೋಪಿಯು ಹಿಂಬಾಲಿಸಿಕೊಂಡು ಹೋಗಿದ್ದ. ಮಹಿಳೆಯನ್ನು ಅಡುಗೆ ಮನೆಯಿಂದ ಸ್ನಾನದ ಕೋಣೆಯವರೆಗೆ ತಳ್ಳಿಕೊಂಡು ಹೋಗಿ ಅಲ್ಲಿ ಬೀಳಿಸಿದ್ದ. ಬಳಿಕ ಬಾತ್‌ಟವೆಲ್‌ನಲ್ಲಿ ಉಸಿರುಗಟ್ಟಿಸಲು ಯತ್ನಿಸಿ ಕುತ್ತಿಗೆಯಲ್ಲಿದ್ದ ಬಂಗಾರದ ಕರಿಮಣಿ ಸರವನ್ನು ಕಸಿಯಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಕೃಷ್ಣರಾಜ ಹೆಗಡೆ ಹೊರಗೆ ಹೋಗಿದ್ದರು.
ಮಹಿಳೆಯು ಬೊಬ್ಬೆ ಹಾಕಿದ್ದು, ಅದನ್ನು ಕೇಳಿಸಿ ಕೃಷ್ಣರಾಜ ಹೆಗಡೆ ಓಡಿ ಬಂದಾಗ ಆರೋಪಿಯು ಪರಾರಿಯಾಗಿದ್ದ. ಪಡುಬಿದ್ರಿ ಪೊಲೀಸರು ಈತನನ್ನು ಕೇವಲ 12 ತಾಸುಗಳಲ್ಲಿ ಮುದರಂಗಡಿಯಲ್ಲಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.