ಉಡುಪಿ: ಕಲ್ಯಾಣಪುರ ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ಸಮಗ್ರ ಜೀರ್ಣೋದ್ಧಾರ, ನೂತನ ಶಿಲಾಮಯ ಗರೋಡಿಯಲ್ಲಿ ಕೋಟಿ ಚೆನ್ನಯರ ಪುನರ್ ಪ್ರತಿಷ್ಠ ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ಎಲ್ಲ ಕೆಲಸಗಳು ಪೂರ್ಣ ಹಂತದಲ್ಲಿದೆ.
ಈ ಗರೋಡಿಯಲ್ಲಿ ವಿಶೇಷವಾಗಿ ಮರದ ಕೆತ್ತನೆಗಳು ಬಹಳಷ್ಟು ಸುಂದರವಾಗಿ ಮೂಡಿಬಂದಿದೆ. ಗರ್ಭಗುಡಿಯ ಒಳಗಿರುವ ಬ್ರಹ್ಮದೇವರ ಗುಡಿಯನ್ನು ಪೂರ್ತಿಯಾಗಿ ಸಾಗುವಾನಿ ಮರದಿಂದ ನಿರ್ಮಿಸಲಾಗಿದ್ದು ನಾಲ್ಕು ಅಡಿ ಸುತ್ತಳತೆಯ ಎಂಟು ಅಡಿ ಎತ್ತರದ ಬ್ರಹ್ಮರ ಗುಡಿಯ ಮುಂಭಾಗದ ದ್ವಾರದ ಎರಡು ಬದಿಯಲ್ಲಿ ಬಡಗತಿಟ್ಟು ಯಕ್ಷಗಾನದ ಕಿರೀಟ ಶೈಲಿಯಲ್ಲಿ ಮೂರು ಬದಿಯ ಕಿಟಕಿಯ ಸುತ್ತ ಸೂರ್ಯ ಮೂಡುವ ಚಿತ್ರದಂತೆ ಕೆತ್ತಲಾಗಿದೆ. ಅದರ ನಾಲ್ಕು ಬದಿಯ ನೆಗಲೆಯಲ್ಲಿ ಐದು ಪ್ರಾಣಿ-ಪಕ್ಷಿಗಳ ವಿವಿಧ ಭಾಗಗಳನ್ನು ಗೋಚರಿಸುವ ರೀತಿಯಲ್ಲಿದೆ. ಇದರ ಮೇಲಿನ ಅಂತಸ್ತಿನ ಎರಡು ಬದಿಯಲ್ಲಿ ಗಣದ್ವಾರ, ತುತ್ತತುದಿಯಲ್ಲಿ ಕಳಸ, ಸುತ್ತಲು ನಾಗದೇವರ ಹೆಡೆ, ಗಜಕೇಸರಿ, ಪದ್ದದ ಚಿತ್ರಗಳನ್ನು ಕೆತ್ತಲಾಗಿದೆ.
ಗರ್ಭಗುಡಿಯ ಹೊರಭಾಗದ ಎರಡು ಬದಿಯ ದಳಿಯಲ್ಲಿ ಕೆಳಗಡೆ ಹಂಸಸಾಲು, ಮೇಲ್ಬಾಗದಲ್ಲಿ ವಿವಿಧ ಹೂವಿನ ಚಿತ್ರ ಮತ್ತು ಬಳ್ಳಿಗಳನ್ನು ಕಂಬದಲ್ಲಿ ಪದ್ಮ ಸಾಲು, ದ್ವಾರದಲ್ಲಿ ನಾಗ ದೇವರು ಮತ್ತು ಕುದುರೆಯ ಸಾಲು, ದ್ವಾರದ ಮೇಲ್ಬಾಗದ ಪದ್ಮಸಹಿತಾ ಕರ್ಣ ಮುಚ್ಚಿಗೆಯನ್ನು ನಾಲ್ಕು ಕಡೆಯಲ್ಲಿ ಅಷ್ಟಪಟ್ಟಿಯನ್ನು ಕೆತ್ತಿದ್ದಾರೆ. ಗರ್ಭಗುಡಿಯ ಹೊರಗಿನ ಮಾಡಿಗೆ ಮಧ್ಯದಲ್ಲಿ ರಥದ ಮತ್ತು ಎರಡು ಬದಿಯಲ್ಲಿ ಅಂಕಣ ಮುಚ್ಚಿಗೆಯನ್ನು ಹೊರಭಾಗದ ಅಂತರ ಮಾಡಿಗೆ ಹಂಸಚಾರು, ಮುಖಮಂಟಪಕ್ಕೆ ಅಷ್ಟಪಟ್ಟಿ ಎರಡು ಬದಿಯಲ್ಲಿ ಕಡವ ಸಾಲು, ಪದ್ಮಸಾಲುಗಳನ್ನು ಕೆತ್ತಲಾಗಿದೆ.
ಈ ಎಲ್ಲ ಕೆಲಸಗಳಿಗೆ ಹಲಸು, ಹೆಬ್ಬೆಲಸು, ಭೋಗಿ ಮರಗಳನ್ನು ಬಳಸಲಾಗಿದೆ. ಮರ ಮತ್ತು ಅದರ ಕೆತ್ತನೆಗೆ 2 ಕೋಟಿ ವೆಚ್ಚವಗಿದ್ದು 6 ತಿಂಗಳಿನಿಂದ ಮಾಧವ ಆಚಾರ್ಯ ಅವರ ತಂಡ ಇದರ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ ಪೂಜಾರಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಿಟ್ಠಲ ಪೂಜಾರಿ ತಿಳಿಸಿದ್ದಾರೆ.