ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ಪಾಲೆದಮರ ಎಂಬಲ್ಲಿ ಕಾರೊಂದು ಅಂಗಡಿಗೆ ನುಗ್ಗಿದ ಪರಿಣಾಮ ತನ್ನ ಪುತ್ರನ ಅಂಗಡಿ ಬಳಿ ಕುಳಿತಿದ್ದ ವೃದ್ಧೆ ಗಂಭೀರ ಗಾಯಗೊಂಡು ಬಳಿಕ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಸುಮತಿ (೯೧) ಎಂದು ಗುರುತಿಸಲಾಗಿದ್ದು, ಇವರು ತನ್ನ ಪುತ್ರ ಮಂಜುನಾಥ ಎಂಬವರ ಅಂಗಡಿ ಬಳಿ ಭಾನುವಾರ ಸಂಜೆ ಕುರ್ಚಿನಲ್ಲಿ ಕುಳಿತಿದ್ದ ವೇಳೆ ಮಣಿಹಳ್ಳ ಕಡೆಯಿಂದ ವಾಮದಪದವು ಕಡೆಗೆ ಶೋಭಾ ಎಂಬ ಮಹಿಳೆ ಚಲಾಯಿಸಿಕೊಂಡು ಬಂದ ಕಾರು ಏಕಾಯೇಕಿ ಅಂಗಡಿಗೆ ನುಗ್ಗಿದೆ. ಗಂಭೀರ ಗಾಯಗೊಂಡ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಸಾವನ್ನಪ್ಪಿದ್ದಾರೆ ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.