ಬಜಪೆ: ಕ್ರಿಕೆಟ್ ಆಡುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮೂಡುಪೆರಾರ ಕಾಯರಾಣೆಯಲ್ಲಿ ನಡೆದಿದೆ. ಕಾಯರಾಣೆ ನಿವಾಸಿ ದಿ. ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ (31) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಾಯರಾಣೆಯಲ್ಲಿ ರವಿವಾರ ಸಂಜೆ ಕ್ರಿಕೆಟ್ ಆಡುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕೈಕಂಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಔಷಧ ತೆಗೆದುಕೊಂಡು ಬಳಿಕ ಬಜಪೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಮೃತರಾದರು ಎಂದು ತಿಳಿದುಬಂದಿದೆ.
ಪಡುಪೆರಾರ ಗ್ರಾಮ ಪಂಚಾಯತಿ ಸಿಬ್ಬಂದಿಯಾಗಿದ್ದ ಅವರು ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯಾಭಿವೃದ್ಧಿ ಸಂಘದ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷರಾಗಿದ್ದರು. 2012ರಲ್ಲಿ ಪಂಚಾಯತ್ ಸಿಬ್ಬಂದಿಯಾಗಿ ಸೇವೆಗೆ ಸೇರಿರುವ ಅವರು, ಕಾಯರಾಣೆ ನವರಂಗ ಫ್ರೆಂಡ್ಸ್‌ನ ಕಾರ್ಯದರ್ಶಿಯಾಗಿದ್ದರು.
ಬಜರಂಗ ದಳದ ಕಾರ್ಯಕರ್ತ, ಜವನೆರ್ ಪೆರಾರ್ ಸದಸ್ಯರಾಗಿದ್ದರು. ಶಾಸಕ ಡಾ. ಭರತ್ ಶೆಟ್ಟಿ ಅವರು ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಮನೆಯವರಿಗೆ ಸಾಂತ್ವನ ನುಡಿದರು.