ಪ್ಯಾರಿಸ್: ಕೇವಲ 100 ಗ್ರಾಂ ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ಒಲಿಂಪಿಕ್ ಫೈನಲ್‌ನಿಂದ ಕುಸ್ತಿಪಟು ವಿನೇಶಾ ಪೋಗಟ್ ಅನರ್ಹವಾದ ಬೆನ್ನಲ್ಲೇ, ಮತ್ತೊಬ್ಬ ಭಾರತೀಯ ಕುಸ್ತಿಪಟು ಒಲಿಂಪಿಕ್ ಕ್ರೀಡಾ ಗ್ರಾಮದಿಂದಲೇ ಗಡಿಪಾರಾಗುವ ಭೀತಿ ಎದುರಿಸುತ್ತಿದ್ದಾರೆ. 53 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಂತಿಮ ಪಂಘಾಲ್ ಅವರನ್ನು ಕ್ರೀಡಾಗ್ರಾಮದಿಂದಲೇ ಹೊರ ಹಾಕಲು ಒಲಿಂಪಿಕ್ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಕ್ರೀಡಾ ಗ್ರಾಮವನ್ನು ಆಕೆಯ ಸಹೋದರಿ ನಿಶಾ ಭಾರತೀಯ ಕುಸ್ತಿಪಟುಗಳ ಮಾನ್ಯತಾ ಕಾರ್ಡ್ ಬಳಸಿ ಪ್ರವೇಶ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ನಿಶಾ ಕ್ರೀಡಾ ಗ್ರಾಮದೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಹಿಂದಿರುಗುವಾಗ ಭದ್ರತಾ ಸಿಬ್ಬಂದಿ ಆಕೆಯನ್ನು ಹಿಡಿದಿಟ್ಟಿದ್ದಾರೆ. ಪೊಲೀಸರು ಆಕೆಯನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಅಂತಿಮ ಪಂಘಾಲ್ ಮತ್ತು ಅವರ ಜೊತೆಗಿದ್ದವರನ್ನು ಪ್ಯಾರಿಸ್‌ನಿಂದ ಗಡಿಪಾರು ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಮಹಿಳೆಯರ 53 ಕೆಜಿ ವಿಭಾಗದಲ್ಲಿ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ ಅಂತಿಮ ಪಂಘಾಲ್ ಸೋತಿದ್ದರು. ಸೋಲಿನ ಬಳಿಕ ಅಂತಿಮ ತಮ್ಮ ಕೋಚ್ ಹಾಗೂ ಸಿಬ್ಬಂದಿಯೊಂದಿಗೆ ಹೋಟೆಲ್‌ಗೆ ಹಿಂದಿರುಗಿದ್ದರು. ಈ ವೇಳೇ ಅವರ ವಸ್ತುಗಳನ್ನು ತರಲೆಂದು ಸಹೋದರಿ ನಿಶಾ ಕ್ರೀಡಾ ಗ್ರಾಮಕ್ಕೆ ತೆರಳಿದ್ದರು. ಅಂತಿಮ ಅವರ ವೈಯಕ್ತಿಕ ಸಹಾಯಕ ಸಿಬ್ಬಂದಿ ವಿಕಾಸ್ ಮತ್ತು ಭಗತ್ ಎಂಬವರು ಕ್ಯಾಬ್‌ನಲ್ಲಿ ಅಮಲೇರಿದ ಸ್ಥಿತಿಯಲ್ಲಿ ಪ್ರಯಾಣಿಸಿದ್ದಾರೆ. ಆದರೆ ಹಣ ಪಾವತಿಸಲು ನಿರಾಕರಿಸಿದ್ದರು. ಇದು ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಎನ್ನಲಾಗಿದೆ.
ಪೋಗಟ್ ಅನರ್ಹತೆ ಬಳಿಕ ಮತ್ತೊಬ್ಬ ಕುಸ್ತಿಪಟುವಿಗೆ ಒಲಿಂಪಿಕ್‌ನಲ್ಲಿ ಅವಮಾನ | ಭಾರತೀಯ ಕುಸ್ತಿಪಟುವನ್ನು ಹೊರಹಾಕಿದ ಒಲಿಂಪಿಕ್ ಅಧಿಕಾರಿಗಳು
RELATED ARTICLES