ಮಂಗಳೂರು/ಉಡುಪಿ: ಲೋಕಸಭಾ ಚುನಾವಣೆಯ ಎರಡನೇ ಹಂತದ, ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ಇಂದು ನಡೆಯುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೆಲವೊಂದು ಘಟನೆಗಳನ್ನು ಹೊರತುಪಡಿಸಿದರೆ ಬಹುತೇಕ ಅವಳಿ ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ, ಬಿರುಸಿನಿಂದ ಸಾಗಿದೆ.
ಬೆಳಿಗ್ಗೆ ಏಳು ಗಂಟೆಯಿಂದ ಆರಂಭವಾದ ಮತದಾನ ಸಂಜೆ ಆರು ಗಂಟೆಯ ವರೆಗೆ ನಡೆಯಲಿದೆ. ಮತದಾರರು ಯಾವುದೇ ಗಡಿಬಿಡಿಯಿಲ್ಲದೆ ಸಂಜೆ ವರೆಗೂ ಮತದಾನ ಮಾಡಬಹುದು. ಬಿಸಿಲಿನ ತಾಪ ಹೆಚ್ಚಿರುವುದರಿಂದ ಹೆಚ್ಚಿನವರು ಬೆಳಗ್ಗೆಯೇ ಮತದಾನ ಮಾಡಿ ಬಂದಿದ್ದಾರೆ. ಮಧ್ಯಾಹ್ನದ ಹೊತ್ತು ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದು, ಸಂಜೆ ಹೊತ್ತು ಮತ್ತೆ ಬಿರುಸುಗೊಳ್ಳುವ ಸಾಧ್ಯತೆಯಿದೆ. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ, ಮೂಡುಬಿದಿರೆ, ಕಾರ್ಕಳ, ಕುಂದಾಪುರ, ಉಡುಪಿಯಲ್ಲೂ ಮತದಾನ ತೀವ್ರಗತಿಯಲ್ಲಿ ಸಾಗಿದೆ. ಒಂದೆರಡು ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾಗಿರುವುದು ಹೊರತುಪಡಿಸಿ, ಉಳಿದಂತೆ ಎಲ್ಲಾ ಕಡೆ ಸರಾಗವಾಗಿ ಮತದಾನ ನಡೆದಿದೆ.