ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ವಡಾಲಾ ಬಂಗಾರ್ ಪೊಲೀಸ್ ಚೌಕಿಯ ಬಳಿ ನಿಗೂಢ ಸ್ಫೋಟದ ಶಬ್ದ ಕೇಳಿ ಬಂದು ಜನತೆ ಬೆಚ್ಚಿಬಿದ್ದ ಘಟನೆ ಶನಿವಾರ ನಡೆದಿದೆ.
ಕಳೆದ ಏಳು ದಿನಗಳಲ್ಲಿ ಮೂರನೇ ಬಾರಿಗೆ ಸ್ಫೋಟದ ಶಬ್ದ ಕೇಳಿಬಂದಿದೆ. ಡಿಸೆಂಬರ್ 17ರಂದು ಮೊದಲ ಬಾರಿಗೆ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆಯ ಬಳಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿರಲಿಲ್ಲ. ಬಳಿಕ ಶುಕ್ರವಾರ ರಾತ್ರಿ 9.30ರ ಸುಮಾರಿಗೂ ಇದೇ ರೀತಿಯ ಸ್ಫೋಟದ ಶಬ್ದ ಕೇಳಿ ಬಂದಿತ್ತು. ಇದೀಗ ಸ್ಫೋಟದ ಶಬ್ದ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜನರು ಬೆಚ್ಚಿ ಬಿದ್ದಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳಕ್ಕೆ ಗುರುದಾಸ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಯಾಮ ಹರೀಶ್ ಕುಮಾರ್, ಓಂ ಪ್ರಕಾಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜುಗರಾಜ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.