ಬಜ್ಪೆಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಯೆಟಿಕಾ ಕವಿಗೋಷ್ಠಿ 47 ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶೂ,ಸಾಕ್ಸ್ ಮತ್ತು ಆಟಿಕೆಗಳ ವಿತರಣೆ

0
56

ದಿನಾಂಕ 16.12.2025 ರಂದು ಮಂಗಳವಾರ ಬಜ್ಪೆಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೊಯೆಟಿಕಾ ಕವಿಗೋಷ್ಠಿ 47 ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ, ಸಾಕ್ಸ್ ಮತ್ತು ಆಟಿಕೆಗಳ ವಿತರಣಾ ಸಮಾರಂಭವನ್ನು ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬೆಥನಿ ಸಂಸ್ಥೆ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಣಿಯವರ ಆಪ್ತ ಸಲಹೆಗಾರರಾಗಿರುವ ವಂದನೀಯ ಭಗಿನಿ ಫ್ಲಾವಿಯ ವಿಲ್ಮಾ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಕನ್ಯಾಮಠದ ಮುಖ್ಯಸ್ಥೆ ವಂದನೀಯ ಭಗಿನಿ ಲಿಲ್ಲಿ ಡಿ’ಸೋಜ ರವರು ಉಪಸ್ಥಿತರಿದ್ದರು.

ಪ್ರಾರ್ಥನಾ ಗೀತೆಯೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳು ಸರ್ವರಿಗೆ ಸ್ವಾಗತ ನೃತ್ಯದೊಂದಿಗೆ ಆತ್ಮೀಯ ಸ್ವಾಗತ ಕೋರಿದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಡೆಲ್ಸಿ ಡಿಸೋಜ ರವರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದರು. ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಪೊಯೆಟಿಕಾ ಮುಖ್ಯಸ್ಥರಾದ ಶ್ರೀ ನವೀನ್ ಪಿರೇರಾ ಸುರತ್ಕಲ್ ಅವರು ಪ್ರಾಸ್ತವಿಕ ನುಡಿಗಳಲ್ಲಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಸಾಂಕೇತಿಕವಾಗಿ ಕೆಲವು ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಡೆಲ್ಸಿ ಡಿಸೋಜ ರವರು ಸರ್ವರಿಗೂ ಸ್ಮರಣಿಕೆಯಾಗಿ ಗುಲಾಬಿ ಹೂವಿನ ಕುಂಡಗಳನ್ನು ನೀಡಿ ಗೌರವ ಸಲ್ಲಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ವಂದನೀಯ ಭಗಿನಿ ಫ್ಲಾವಿಯ ವಿಲ್ಮಾ ರವರು ಪೊಯೆಟಿಕಾದ ಸಮಾಜಮುಖಿ ಕಾರ್ಯವೈಖರಿಯನ್ನು ಶ್ಲಾಘಿಸಿ ಶುಭ ಹಾರೈಸಿದರು. ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಕುಮಾರಿ ಮಿಸ್ರಿಯ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಹ ಶಿಕ್ಷಕಿ ಶ್ರೀಮತಿ ಶ್ವೇತ ಡಿಸಿಲ್ವ ರವರು ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕಿ ಶ್ರೀಮತಿ ಅನಿತಾ ಸಲ್ಡಾನ್ಹ ರವರು ಕಾರ್ಯಕ್ರಮವನ್ನು ಸುಸೂತ್ರವಾಗಿ ನಿರೂಪಿಸಿದರು.

ಮ್ಯಾಕ್ಸಿಮ್ ರೊಡ್ರಿಗಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಪೊಯೆಟಿಕಾ ಕವಿಗೋಷ್ಠಿ 47ರಲ್ಲಿ ಕವಿಗಳಾದ ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಹುಸೇನ್ ಕಾಟಿಪಳ್ಳ, ಸ್ಟಾನಿಸ್ಲಾಸ್ ಡಿಸೋಜ ಕಿರೆಂ, ಶ್ರೀಮತಿ ಜುಲಿಯೆಟ್ ಮೊರಾಸ್ ದೆರೆಬೈಲ್, ಐರಿನ್ ಮೆಂಡೋನ್ಸಾ ಕಾಸ್ಸಿಯಾ ಹಾಗೂ ಪೊಯೆಟಿಕಾ ಮುಖ್ಯಸ್ಥರಾದ ನವೀನ್ ಪಿರೇರಾ ಸುರತ್ಕಲ್ ತಮ್ಮ ಕವಿತಾ ವಾಚನದ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು. ಎಡ್ವರ್ಡ್ ಲೋಬೊ ತೊಕ್ಕೊಟ್ಟು ರವರು ಮಿಮಿಕ್ರಿಯ ಮೂಲಕ ಸಭಿಕರನ್ನು ಮನರಂಜಿಸಿದರು.

ಕೊನೆಯಲ್ಲಿ ಎಲ್ಲಾ ಮಕ್ಕಳಿಗೂ ಶೂ, ಸಾಕ್ಸ್ ಹಾಗೂ ಆಟಿಕೆಗಳನ್ನು ವಿತರಿಸಲಾಯಿತು. ಆಟಿಕೆಗಳನ್ನು ಪಡೆದ ಮಕ್ಕಳ ಸಂಭ್ರಮದಿಂದ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿ, ಆನಂದದ ಹೊಳೆಯೇ ಹರಿದಂತಾಯಿತು.

LEAVE A REPLY

Please enter your comment!
Please enter your name here