ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ಜೂ. 22, ಶನಿವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಉಡುಪಿಯ ಎಂಜಿಎಂ ಕಾಲೇಜು ಆವರಣದ ದ್ವನ್ಯಾಲೋಕ, ಆರ್.ಆರ್.ಸಿ.ಯಲ್ಲಿ ಸಮಾರಂಭ ನಡೆಯಲಿದೆ.
ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ – 2024 ತುಳುಭಾಷೆ ಹಾಗೂ ಸಂಸ್ಕೃತಿ ಚಿಂತಕ ಬೆನೆಟ್ ಜಿ. ಅಮ್ಮನ್ನ ಅವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ವಹಿಸಲಿದ್ದಾರೆ.
ನಿವೃತ್ತ ಪ್ರಾಂಶುಪಾಲರು, ರೆಡ್‌ಕ್ರಾಸ್ ಉಡುಪಿ ಇದರ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಡುಪಿಯ ಡಾ. ಜಿ. ಶಂಕರ್ ಸ.ಮ.ಪ್ರ. ದರ್ಜೆ ಕಾಲೇಜು ಮತ್ತು ಸ್ನಾ. ಅ. ಕೇಂದ್ರ ಅಜ್ಜರಕಾಡು ಇದರ ಇತಿಹಾಸ ಸಹಪ್ರಾಧ್ಯಾಪಕ ಡಾ. ರಾಮದಾಸ್ ಪ್ರಭು ಅವರು ʻತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳುʼ ವಿಷಯದಲ್ಲಿ ವಿಶೇಷ ಉಪಾನ್ಯಾಸ ನೀಡಲಿದ್ದಾರೆ.
ಮಂಗಳೂರು ನಿಟ್ಟಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಮುಖ್ಯಸ್ಥರಾದ ಡಾ. ಸಾಯಿಗೀತ ಅಭಿನಂದನೆ ಸಲ್ಲಿಸಲಿದ್ದಾರೆ. ಚೇಳ್ಯಾರುಗುತ್ತು ಎಸ್ಾರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಡಾ. ಇಂದಿರಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮಾಹೆ ಮತ್ತು ಚೇಳ್ಯಾರುಗುತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ) ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.