ಮಂಗಳೂರು : ಮಂಗಳೂರಿನ ಹೊರವಲಯದ ವಳಚ್ಚಿಲ್‌ನ ಮನೆಯೊಂದರಲ್ಲಿ ನಡೆಯುತ್ತಿದ್ದ ಕಸಾಯಿಖಾನೆಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ 180 ಕೆ.ಜಿ. ದನದ ಮಾಂಸ ವಶಪಡಿಸಿ, ಮೂವರನ್ನು ಬಂಧಿಸಿದ ಘಟನೆ ನಡೆದಿದೆ.
ಅಡ್ಯಾರ್ ವಳಚ್ಚಿಲ್ ನಿವಾಸಿ ಖಾದರ್ ಯಾನೆ ಮೋನು (52), ಮಾರಿಪ್ಪಳ ನಿವಾಸಿ ಇಸ್ಮಾಯಿಲ್ (27), ಅಡ್ಯಾರ್‌ಪದವು ನಿವಾಸಿ ಶವೀರ್ (18) ಬಂಧಿತ ಆರೋಪಿಗಳು.
ವಳಚ್ಚಿಲ್‌ನ ಖಾದರ್ ಎಂಬಾತನ ಮನೆಯ ಶೆಡ್‌ನಲ್ಲಿ ಕಸಾಯಿ ನಿರ್ಮಿಸಿದ್ದಾರೆ ಎಂಬ ದೂರು ಕೇಳಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕ ಶಿವಕುಮಾರ್, ಅರುಣ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.