ಬೆಳ್ತಂಗಡಿ: ಹೆದ್ದಾರಿ ಅಭಿವೃದ್ಧಿಗಾಗಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಅಲ್ಲಲ್ಲಿ ರಸ್ತೆ ಅಗೆದು, ಮಣ್ಣು ಹಾಕಿ ಕಾಮಗಾರಿ ನಡೆಯುತ್ತಿದೆ. ಇದೀಗ ಮಳೆಗಾಲ ಸಮೀಪಿಸುತ್ತಿದೆ. ಆದರೆ ರಸ್ತೆ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿಯಿದೆ. ಶನಿವಾರ ಬಂದ ಕೊಂಚ ಮಳೆಯಿಂದಲೇ ಈ ಭಾಗದಲ್ಲಿ ಹೆದ್ದಾರಿಯಲ್ಲಿ ಮಣ್ಣು ಮೆದುಗೊಂಡು ವಾಹನ ಸವಾರರು ಹರಸಾಹಸಪಟ್ಟರು.
ಪೂಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ಮದ್ದಡ್ಕ, ಗುರುವಾಯನಕೆರೆ, ಲಾಯಿಲ, ಉಜಿರೆ, ನಿಡಗಲ್, ಮುಂಡಾಜೆ ಮುಂತಾದೆಡೆ ರಸ್ತೆ ಕಾಮಗಾರಿಗೆ ಇಕ್ಕೆಲಗಳಲ್ಲಿ ಚರಂಡಿಯಂತೆ ಅಲ್ಲಲ್ಲಿ ನಿರ್ಮಿಸಲಾಗಿದ್ದು, ಅದರೆಡೆ ಮಣ್ಣು ಹಾಕಿ ದಿಬ್ಬದಂತೆ ಏರಿಸಲಾಗಿದೆ. ಬೇಸಿಗೆಯಲ್ಲಿ ಧೂಳಿನಿಂದ ಆವರಿಸಿದ್ದ ರಸ್ತೆ ಈಗ ಮಳೆಯಿಂದಾಗಿ ಕೆಸರಿನಿಂದ ಆವೃತ್ತವಾಗಲಿದೆ. ಶನಿವಾರದ ಮಳೆಯಿಂದಲೇ ಪರಿಸರದಲ್ಲಿ ವಾಹನಗಳು ರಸ್ತೆಯಲ್ಲಿ ಜಾರಲಾರಂಭಿಸಿದ್ದವು. ಇದರಿಂದಾಗಿ ಹೆದ್ದಾರಿಯಲ್ಲಿ ಪ್ರಯಾಣಿಸಲು ಸವಾರರು ಕಷ್ಟಪಡಬೇಕಾದ ವಾತಾವರಣ ನಿರ್ಮಾಣವಾಗಿತ್ತು. ಅಂಬಡ್ತಾರು ಎಂಬಲ್ಲಿ ಜಾರುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಎಎಸ್ಸಾರ್ಟಿಸಿ ಬಸ್ಸು ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ. ಪಿಕಪ್ ಜಖಂಗೊಂಡಡು, ಟ್ರಾಫಿಕ್ ಜಾಮ್ ಆಗಿತ್ತು. ಕೆಲವೆಡೆ ಬೈಕ್ ಗಳು ಮಣ್ಣಿನಡಿ ಸಿಲುಕಿ ಪರದಾಡುವಂತಾಗಿದೆ. ಹೆದ್ದಾರಿ ಕಾಮಗಾರಿ ತೀರಾ ಅಪೂರ್ಣವಾಗಿದ್ದು, ಮೊದಲ ಮಳೆಗೇ ಈ ರೀತಿಯಾದರೆ ಇನ್ನು ಮಳೆಗಾಳದಲ್ಲಿ ಈ ರಸ್ತೆಯಲ್ಲಿ ಹೇಗೆ ಪ್ರಯಾಣಿಸುವುದು ಎಂಬುದು ವಾಹನ ಸವಾರರ ಚಿಂತೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಕಾಮಗಾರಿ ತೀವ್ರಗೊಳಿಸುವ ಅಥವಾ ಮಳೆಗಾಲಕ್ಕೂ ಮೊದಲು ಪ್ರಯಾಣಕ್ಕೆ ಸೂಕ್ತವಾದಂತೆ ರಸ್ತೆ ನಿರ್ಮಿಸುವಂತೆ ಆಗ್ರಹ ಕೇಳಿಬರುತ್ತಿದೆ.