Sunday, July 14, 2024
Homeಅಪರಾಧಪೋರ್ಶೆ ಕಾರು ಅಪಘಾತ ಪ್ರಕರಣ: ಸಾಕ್ಷ್ಯ ನಾಶಪಡಿಸಿದ ಇಬ್ಬರು ವೈದ್ಯರ ಬಂಧನ

ಪೋರ್ಶೆ ಕಾರು ಅಪಘಾತ ಪ್ರಕರಣ: ಸಾಕ್ಷ್ಯ ನಾಶಪಡಿಸಿದ ಇಬ್ಬರು ವೈದ್ಯರ ಬಂಧನ

ಪುಣೆ: ಪುಣೆಯಲ್ಲಿ ನಡೆದ ಪೋರ್ಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಆರೋಪಿ ಬಾಲಕನ ರಕ್ತದ ಮಾದರಿಯನ್ನು ತಿರುಚಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇಲ್ಲಿನ ಸಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರೂ ಸೇರಿದ್ದಾರೆ. ಬಂಧಿತರನ್ನು ಡಾ. ಅಜಯ್ ತಾವರೆ ಮತ್ತು ಶ್ರೀಹರಿ ಹಾರ್ನರ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ರಕ್ತ ಮಾದರಿಯನ್ನು ತಿರುಚಿ ಮತ್ತು ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ವೈದ್ಯರನ್ನು ಬಂಧಿಸಲಾಗಿದೆ’. ಸದ್ಯ ಈ ಪ್ರಕರಣವನ್ನು ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 19 ರ ಮುಂಜಾನೆ ಪುಣೆಯ ಉದ್ಯಮಿಯೊಬ್ಬರ ಅಪ್ರಾಪ್ತ ಮಗ ಚಲಾಯಿಸುತ್ತಿದ್ದ ಐಷಾರಾಮಿ ಪೋರ್ಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಐಟಿ ಉದ್ಯೋಗಿಗಳು ಸಾವಿಗೀಡಾಗಿದ್ದರು. ಕಾರು ಚಲಾಯಿಸುವ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗೆ ಆರಂಭದಲ್ಲಿ ಬಾಲನ್ಯಾಯ ಮಂಡಳಿಯು ಜಾಮೀನು ನೀಡಿತು ಮತ್ತು ರಸ್ತೆ ಅಪಘಾತಗಳ ಬಗ್ಗೆ ಪ್ರಬಂಧ ಬರೆಯುವಂತೆ ಕೇಳಿತ್ತು. ಸದ್ಯ ಬಾಲಕನನ್ನು ಜೂನ್ 5ರವರೆಗೆ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಲಕನ ತಂದೆ ಹಾಗೂ ಉದ್ಯಮಿ ವಿಶಾಲ್ ಅಗರ್‌ವಾಲ್, ತಾತ ಸುರೇಂದ್ರ ಅಗರ್‌ವಾಲ್‌ರನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular