ಮೂಡುಬಿದಿರೆ: ಕರಾವಳಿ ಕರ್ನಾಟಕದ ಕಣ್ಣಿನ ಆಸ್ಪತ್ರೆಗಳ ದೊಡ್ಡ ನೆಟ್‌ವರ್ಕ್ ಹೊಂದಿರುವ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ಸುಸಜ್ಜಿತ ಚಿಕಿತ್ಸಾ ಕೇಂದ್ರ ಮೂಡುಬಿದಿರೆಯ ಬಡಗ ಬಸದಿ ಎದುರಿನ ಫಾರ್ಚೂನ್-2 ಕಟ್ಟಡದಲ್ಲಿ ಮಾರ್ಚ್ 16ರಂದು ಉದ್ಘಾಟನೆಗೊಳ್ಳಲಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾರ್ಚ್ 16ರಂದು ಬೆಳಿಗ್ಗೆ 10.30ಕ್ಕೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ನೂತನ ಆಸ್ಪತ್ರೆಯನ್ನು ಉದ್ಘಾಟಿಸುವರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆವಹಿಸುವರು. ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಪುರಸಭೆ ಸದಸ್ಯ ಪಿ.ಕೆ ಥೋಮಸ್, ಫಾರ್ಚೂನ್ ಪ್ರಮೋರ‍್ಸ್ನ ಆಡಳಿತ ನಿರ್ದೇಶಕ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಗಳಾಗಿರುವರು.
2002ರಲ್ಲಿ ಉಡುಪಿಯಲ್ಲಿ ಪ್ರಾರಂಭವಾದ ಪ್ರಸಾದ್ ನೇತ್ರಾಲಯ ಕರ್ನಾಟಕ, ಗೋವಾ ಹಾಗೂ ಕೇರಳದಲ್ಲಿ ಚಿಕಿತ್ಸಾ ಕೇಂದ್ರಗಳನ್ನು ಹೊಂದಿದೆ. ನೇತ್ರ ಚಿಕಿತ್ಸೆಯಲ್ಲಿ ಅತ್ಯಾಧುನಿಕ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೋಪಕರಣಗಳನ್ನು ಅಳವಡಿಸಿಕೊಂಡು ತಜ್ಞ ವೈದ್ಯರು ಹಾಗೂ ಪರಿಣತ ತಾಂತ್ರಿಕ ಸಹಾಯಕರ ತಂಡದೊಂದಿಗೆ ಚಿಕಿತ್ಸೆ ನೀಡುತ್ತಾ ಬಂದಿದೆ. ರೋಗಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ 40 ಸಾವಿರ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಂಡಿದ್ದು ಇಂತಹ ಶಿಬಿರಗಳು ನಿರಂತರವಾಗಿ ನಡೆಯಲಿವೆ ಎಂದರು. ಗ್ರಾಮೀಣ ಜನರಿಗೂ ಕಣ್ಣಿನ ಉತ್ತಮ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯವನ್ನು ಆರಂಭಿಸಲು ಮುಂದಾಗಿದ್ದೇವೆ ಎಂದು ಹೇಳಿದರು. ಆಸ್ಪತ್ರೆಯ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಡಾ.ಸ್ಮೃತಿ, ಡಾ.ವಿಕ್ರಮ್ ಜೈನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
