Saturday, January 18, 2025
Homeಹುಬ್ಬಳ್ಳಿಸಕಾಲಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವು: ಪತ್ನಿಯ ಸಾವಿನಿಂದ ನೊಂದು ಪತಿ ಆತ್ಮಹತ್ಯೆಗೆ ಯತ್ನ

ಸಕಾಲಕ್ಕೆ ಚಿಕಿತ್ಸೆ ಸಿಗದೆ ಗರ್ಭಿಣಿ ಸಾವು: ಪತ್ನಿಯ ಸಾವಿನಿಂದ ನೊಂದು ಪತಿ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿ ರಾಧಿಕಾ ಮಲ್ಲೇಶ್ ಗಡ್ಡಿಹೊಳಿ (19) ಸಾವು ಪ್ರಕರಣ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಪತ್ನಿ ಸಾವಿನ ಸುದ್ದಿ ತಿಳಿದು ವಿಷ ಸೇವಿಸಿ ಪತಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮಲ್ಲೇಶ್​(25) ಆತ್ಮಹತ್ಯೆಗೆ ಯತ್ನಿಸಿದ ರಾಧಿಕಾಳ ಪತಿ. ಇವರನ್ನು ಮಲ್ಲೇಶ್​ಗೆ ಕಿಮ್ಸ್​ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿ ಮೂಲದ ರಾಧಿಕಾ ಗಡ್ಡಿಹೊಳಿ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಎಂಟೂವರೆ ತಿಂಗಳ ಗರ್ಭಿಣಿ ಆಗಿದ್ದ ರಾಧಿಕಾಗೆ 6 ಬಾರಿ ಫಿಟ್ಸ್ ಬಂದಿತ್ತು. ಮೊನ್ನೆ ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಫಿಟ್ಸ್ ಬಂದು ಸೀರಿಯಸ್ ಆಗಿದ್ದರು. 2 ಆಸ್ಪತ್ರೆಗೆ ಕರೆದೊಯ್ದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿರಲಿಲ್ಲ. ಬಳಿಕ ಬೆಳಗಾವಿಯ ಬಿಮ್ಸ್​ಗೆ ಕರೆದುಕೊಂಡು ಬರುವಷ್ಟರಲ್ಲಿ ಶಿಶು ಗರ್ಭಿಣಿಯ ಹೊಟ್ಟೆಯಲ್ಲೇ ಮೃತಪಟ್ಟಿತ್ತು. ರಾಧಿಕಾ ಸ್ಥಿತಿಯೂ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಬಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ರಾಧಿಕಾ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿಯಲ್ಲಿ ಕಿಮ್ಸ್​ ಆಸ್ಪತ್ರೆ ನಿರ್ದೇಶಕ ಎಸ್​​ಎಫ್​ ಕಮ್ಮಾರ ಪ್ರತಿಕ್ರಿಯಿಸಿದ್ದು, ಬೆಳಗಾವಿಯಿಂದ ಕಿಮ್ಸ್ ಆಸ್ಪತ್ರೆ ಬಂದಾಗ ಗರ್ಭಿಣಿ ರಾಧಿಕಾ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಿಪಿ, ನಾಡಿಮಿಡಿತ ಇರಲಿಲ್ಲ, ರಾಧಿಕಾ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಹೊಟ್ಟೆಯಲ್ಲಿ ಮಗು ಮೃತಪಟ್ಟಿತ್ತು. ಆದರೆ ನಮ್ಮ ವೈದ್ಯರು ಸಕಾಲದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ.

ಸತ್ತ ಮಗು ರಾಧಿಕಾ ಹೊಟ್ಟೆಯಲ್ಲೇ ಇದ್ದು, ಅವರಿಗೆ ಪ್ರಜ್ಞೆ ಬಂದಾಗ ಗರ್ಭದಿಂದ ಮಗು ಹೊರ ತೆಗೆಯುವ ಆಲೋಚನೆ ಇತ್ತು. ಆದರೆ ಅವರ ಆರೋಗ್ಯ ಚೇತರಿಕೆ ಆಗಲೇ ಇಲ್ಲ. ಇಂದು ಬೆಳಗ್ಗೆ 11 ಗಂಟೆ ರಾಧಿಕಾ ಸಾವನ್ನಪ್ಪಿದ್ದಾರೆ. ಇದರಿಂದ ಮನನೊಂದು ಆಕೆ ಪತಿ ಮಲ್ಲೇಶಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular