ಬೆಂಗಳೂರು: ಖಾಸಗಿ ಕೈಗಾರಿಕೆಗಳು, ಕಾರ್ಖಾನೆಗಳು, ಕಂಪನಿಗಳು ಮತ್ತು ಇತರ ಸಂಸ್ಥೆಗಳ ನಿರ್ವಹಣಾ ಸ್ಥಾನಗಳಲ್ಲಿ ಶೇ. 50ರಷ್ಟು ಮತ್ತು ನಿರ್ವಹಣೇತರ ಹುದ್ದೆಗಳಲ್ಲಿ ಶೇ. 75ರಷ್ಟು ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಬೇಕೆಂಬ ಮಸೂದೆಯನ್ನು ರಾಜ್ಯ ಸರ್ಕಾರದ ಸಚಿವ ಸಂಪುಟ ಅನುಮೋದಿಸಿದೆ.
ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಲ್ಪಿಸುವ ಐತಿಹಾಸಿಕ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿದೆ. ಈ ಹೊಸ ನಿಯಮ ಐಟಿ ಕಂಪನಿಗಳಿಗೂ ಅನ್ವಯ ಆಗಲಿದೆ. ಆಡಳಿತ (ಮ್ಯಾನೇಜ್ ಮೆಂಟ್) ಕೋಟಾದಡಿ ಶೇ. 50 ಮೀಸಲಾತಿ ನಿಗದಿಪಡಿಸಲಾಗಿದೆ. ಆಡಳಿತಾತ್ಮಕ ಕೋಟಾದಡಿ ಸೂಪರ್ ವೈಸರ್, ಮ್ಯಾನೇಜರ್, ತಾಂತ್ರಿಕ ತಜ್ಞರು ಸೇರಿದಂತೆ ಹಲವು ಹುದ್ದೆಗಳು ಪರಿಗಣಿಸಲ್ಪಡುತ್ತವೆ.
ಆಡಳಿತಾತ್ಮಕವಲ್ಲದ ಕೋಟಾದಡಿ ಶೇ. 75 ರಷ್ಟು ಮೀಸಲಾತಿ ಸಿಗಲಿದೆ. ಗುಮಾಸ್ತ, ಅಕುಶಲ, ಅರೆಕುಶಲ ಸೇರಿದಂತೆ ಮತ್ತಿತರ ಹುದ್ದೆಗಳು ಈ ವಿಭಾಗದಲ್ಲಿರಲಿವೆ. ಗುತ್ತಿಗೆ ಆಧಾರದ ನೇಮಕಾತಿಗೂ ಇದು ಅನ್ವಯ ಆಗಲಿದೆ. ಖಾಸಗಿ ರಂಗದ ಮೀಸಲಾತಿಗೆ ಸಂಬಂಧಿಸಿದ ಬಹುಕಾಲದ ಬೇಡಿಕೆ ಇದೀಗ ಕೈಗೂಡುವ ಸಮಯ ಸಮೀಪಿಸಿದೆ. ಈ ಕುರಿತ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾಗಿ ಕಾನೂನಾದರೆ ಕರ್ನಾಟಕದಲ್ಲಿ ಆರಂಭವಾಗುವ ಮತ್ತು ಈಗಾಗಲೇ ಆರಂಭಗೊಂಡು ಚಾಲ್ತಿಯಲ್ಲಿರುವ ಯಾವುದೇ ಖಾಸಗಿ ಕಂಪನಿ, ಸಂಸ್ಥೆಗಳಲ್ಲಿ ಕನ್ನಡಿಗ ಅಭ್ಯರ್ಥಿಗಳಿಗೆ ಉದ್ಯೋಗದ ಪ್ರಮಾಣದಲ್ಲಿ ಶೇ. 75ರಷ್ಟು ಪಾಲು ಕಡ್ಡಾಯವಾಗಿ ಸಿಗಲಿದೆ.