ಚಿಕ್ಕೋಡಿ: ಸಾಮಾನ್ಯ ಚುನಾವಣೆಗಳಲ್ಲೂ ನಾಮಪತ್ರ ಸಲ್ಲಿಕೆಯ ವೇಳೆ ಸಾವಿರಾರು ಬೆಂಬಲಿಗರನ್ನು ಸೇರಿಸಿ ಅದ್ದೂರಿ ಮೆರವಣಿಗೆ ನಡೆಸುವುದು ಸಾಮಾನ್ಯ. ಆದರೆ ಅದಕ್ಕೆ ಭಿನ್ನವಾಗಿ ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅತ್ಯಂತ ಸರಳವಾಗಿ ನಾಮಪತ್ರ ಸಲ್ಲಿಸಿದರು. ಯಾವುದೇ ಮೆರವಣಿಗೆ, ಆಡಂಬರವಿಲ್ಲದೆ ಸರಳವಾಗಿ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ಜಾರಕಿಹೊಳಿ ತಂದೆ, ಸಚಿವರಾದ ಸತೀಶ್ ಜಾರಕಿಹೊಳಿ ಆದರ್ಶದಂತೆ ನಡೆಯುತ್ತಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಿಯಾಂಕಾ ನಾಮಪತ್ರ ಸಲ್ಲಿಸುವ ವೇಳೆ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಸ್ಮಿ ಹೆಬ್ಬಾಳ್ಕರ್, ವಿಧಾನ ಪರಿಷತ್ ಸದಸ್ಯ, ದೆಹಲಿ ವಿಶೇಷ ಪ್ರತಿನಿದಿ ಪ್ರಕಾಶ ಹುಕ್ಕೇರಿ, ಶಾಸಕರುಗಳಾದ ಲಕ್ಷ್ಮಣ ಸವದಿ, ಗಣೇಶ ಹುಕ್ಕೇರಿ, ರಾಜು ಕಾಗೆ, ಮಹೇಂದ್ರ ತಮ್ಮಣ್ಣವರ್, ವಿಶ್ವಾಸ ವೈದ್ಯ, ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ಬಾಬಾ ಸಾಹೇಬ್ ಪಾಟೀಲ್ ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವ ತನಕ ಮಾಜಿ ಸಚಿವರಾದ ವೀರಕುಮಾರ ಪಾಟೀಲ್, ಎ.ಬಿ. ಪಾಟೀಲ್, ಮಾಜಿ ಶಾಸಕರಾದ ಕಾಕಾ ಸಾಹೇಬ್ ಪಾಟೀಲ್, ಶ್ಯಾಮ್ ಘಾಟಗೆ, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟೆ, ಉತ್ತಮ ಪಾಟೀಲ್, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಮತ್ತಿತರರು ಉಪಸ್ಥಿತರಿದ್ದರು.