ಪಡುಬಿದ್ರಿ: ಸ್ಥಳೀಯರಿಗೆ ನೀಡಲಾಗಿದ್ದ ಟೋಲ್ ವಿನಾಯಿತಿ ರದ್ದುಪಡಿಸಿರುವುದನ್ನು ವಿರೋಧಿಸಿ ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿ ಹೆಜಮಾಡಿ ಟೋಲ್ ಪ್ಲಾಝಾದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಹೆಜಮಾಡಿ ಟೋಲ್ ಪ್ಲಾಝಾ 2016ರಿಂದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಾಚರಿಸುತ್ತಿದೆ. ಈ ರಸ್ತೆ ಅಭಿವೃದ್ಧಿಯ ವೇಳೆ ಈ ಭಾಗದ ಜನರು ತಮ್ಮ ಮನೆ ಭೂಮಿಯನ್ನು ಕಳೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಹಾಗೂ ಸಾಸ್ತಾನದಲ್ಲಿ ಕೋಟ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಆದೇಶ 2016ರಲ್ಲೇ ನೀಡಲಾಗಿತ್ತು. ಜಿಲ್ಲಾಧಿಕಾರಿಯವರ ಸಭೆಯಲ್ಲೇ ಅದು ನಿರ್ಣಯವಾಗಿತ್ತು.
ಈಗ ಏಕಾಏಕಿ ಸ್ಥಳೀಯ ವಾಹನಗಳ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತಗೊಳಿಸುವ ಮೂಲಕ ಟೋಲ್ ವಿನಾಯಿತಿ ರದ್ದುಪಡಿಸಿರುವುದು ತಿಳಿದುಬಂದಿದೆ. ಕೂಡಲೇ ಈ ಹಿಂದೆ ಇದ್ದ ವಿನಾಯಿತಿ ಮುಂದುವರೆಸಬೇಕು. ಒಂದು ವೇಳೆ ಮುಂದುವರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.
ಸಮಿತಿಯ ಅಧ್ಯಕ್ಷ ಶೇಖರ್ ಹೆಜಮಾಡಿ, ಗೌರವಾಧ್ಯಕ್ಷ ಶೇಖಬ್ಬ ಕೋಟಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ರೇಷ್ಮಾ ಎ ಮೆಂಡನ್, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ಸೇರಿದಂತೆ ಹಲವು ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು..