ಪುತ್ತೂರು: ತುಳು ಭಾಷೆಯ ಉಳಿವಿಗಾಗಿ ಜಾಗೃತಿಯ ಕೆಲಸ ನಿರಂತರವಾಗಿ ನಡೆಯುತ್ತಿದೆ. ತುಳುಲಿಪಿಯ ಬಗ್ಗೆ ಯಾವುದೇ ಅನುಮಾನಗಳು ಬೇಡ. ವಿಧಾನ ಸೌಧದ ಒಳಗೂ ತುಳು ಭಾಷೆ ಕೇಳುತ್ತಿದ್ದು, ರಾಜ್ಯ ಎರಡನೇ ಭಾಷೆಯಾದ ಬಳಿಕ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಪುತ್ತೂರು ತುಳುಕೂಟದಿಂದ ನಡೆದ ಪುತ್ತೂರು ತಾಲೂಕು ತುಳುವೆರೆ ಮೇಳೂ-2024 ನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಳಸೆಗೆ ಭತ್ತವನ್ನು ಹಾಕಿದ ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಮಾತನಾಡಿ, ತುಳು 8ನೇ ಪರಿಚ್ಛೇಧಕ್ಕೆ ಸೇರ್ಪಡೆಯಾಗಬೇಕೆಂಬ ನಿಟ್ಟಿನಲ್ಲಿ ಇಪ್ಪತ್ತೈದು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿದೆ. ಸದ್ಯ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ ತುಳುವಿನ ಬಗ್ಗೆ ಉತ್ತಮ ಚರ್ಚೆ ನಡೆದಿದ್ದು, ಸಮಿತಿ ಮಾಡಿ ರಾಜ್ಯದ ಎರಡನೇ ಭಾಷೆ ಮಾಡುವ ಪ್ರಯತ್ನ ಮಾಡುವ ಬಗ್ಗೆ ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು.