ಪುತ್ತೂರು: ಸವಣೂರಿನ ಪ್ರಖ್ಯಾತ ಅತಿಶಯ ಕ್ಷೇತ್ರ ಪುಷ್ಪಪುರ ಪುದುಬೆಟ್ಟು ಶ್ರೀ ಪದ್ಮಾವತಿ ದೇವಿಯ ತುಳು ಭಕ್ತಿಗೀತೆ ‘ಪುದ್ದೊಟ್ಟುದಪ್ಪೆ ಪದ್ಮಾವತಿ’ ಯನ್ನು ಸವಣೂರಿನ ಶಿಲ್ಪಿ, ಸೀತಾರಾಮ ರೈ ಸವಣೂರು ದಂಪತಿಗಳು ಪುದುಬೆಟ್ಟು ಜಿನಮಂದಿರದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಜಿನಮಂದಿರದ ಆಡಳಿತ ಮೊಕ್ತೇಸರರಾದ ಬೆಳಂದೂರು ಗುತ್ತು ಶತ್ರುಂಜಯ ಆರಿಗ, ದೇವಾಲಯದ ಅರ್ಚಕರಾದ ಶ್ರೇಯಾಂಸ್ ಕುಮಾರ್ ಇಂದ್ರ, ಭರತ್ ಕೆಮ್ಮಾರ, ಸಚಿನ್ ಭಂಡಾರಿ ಸವಣೂರು, ಮೋಹನ್ ರೈ ಕೆರೆಕೋಡಿ ಮತ್ತು ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.
ಮಮತಾ ಯತೀಶ್, ಬೇಬಿ ಕಾಶ್ನಿ ಕಾನಾವುಜಾಲು ಇವರ ನಿರ್ಮಾಣದ ಹರೀಶ್ ಮಂಜೊಟ್ಟಿ ಅವರು ಸಾಹಿತ್ಯ ರಚಿಸಿ, ಗಾಯಕ ದಂಪತಿಗಳಾದ ಗುಣಪಾಲ್ ಮತ್ತು ಚೇತನಾ ಹಾಡಿರುವ ಈ ಭಕ್ತಿಗೀತೆಯನ್ನು ಮಂದಾರ ಕ್ರೀಯೆಷನ್ಸ್ ಅರ್ಪಿಸಿದೆ.
ಈ ಕ್ಷೇತ್ರಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದ್ದು, ಇಲ್ಲಿ ಮೂಲ ತೀರ್ಥಂಕರ ಚಂದ್ರನಾಥ ಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ದೇವಿ ನೆಲೆಸಿದ್ದು, ಭಕ್ತಾದಿಗಳು ಶುಭಕಾರ್ಯದಿಗಳ ಮುನ್ನ ದೇವಿಗೆ ಹೂವಿನ ಪೂಜೆ ನೆರೆವೇರಿಸಿ, ಪೂಜೆ ಸಂದರ್ಭದಲ್ಲಿ ದೇವಿಯ ಬಲಭಾಗದಿಂದ ಹೂ ಬೀಳುವ ಮೂಲಕ ಪ್ರಸಾದವಾದರೆ ತಮ್ಮ ಇಷ್ಟಾರ್ಥ ನೆರೆವೇರುತ್ತದೆ ಎನ್ನುವ ನಂಬಿಕೆ ವಿಶೇಷವಾಗಿದೆ.
ಇಲ್ಲಿಯ ಇನ್ನೊಂದು ವಿಶೇಷವೆಂದರೆ ದೇವಾಲಯದ ವಠಾರದಲ್ಲಿ ಸದಾ ಅರಳುತ್ತಿರುವ ಕೇಪುಳ ಹೂವಿಗೆ ಹದಿನಾರು ಎಸಳುಗಳಿರುವುದು.