ಸುರತ್ಕಲ್: ಮಂಗಳೂರು ಹೊರವಲಯದ ಮುಕ್ಕ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆದಿದೆ. ಕಾಲೀಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಮನೋಶಾಸ್ತ್ರ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿ ರ‍್ಯಾಗಿಂಗ್ ಪಿಡುಗಿಗೆ ಒಳಗಾದ ವಿದ್ಯಾರ್ಥಿಯಾಗಿದ್ದು ನವೆಂಬರ್ 25 ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿದಾಯಿಸ್ ಎಂಬಾತ ಲೊಕೇಶನ್ ಕಳುಹಿಸಿ, ಅಲ್ಲಿಗೆ ಬರುವಂತೆ ಕಿರಿಯ ವಿದ್ಯಾರ್ಥಿಗೆ ತಿಳಿಸಿದ್ದಾನೆ.
ಆತ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ನಿಗದಿತ ಸ್ಥಳಕ್ಕೆ ತೆರಳಿದ್ದಾನೆ. ಹಿರಿಯ ವಿದ್ಯಾರ್ಥಿಯ ಕೊಠಡಿಯೊಳಗೆ ಹೋದ ಬಳಿಕ, ಅಲ್ಲಿಯೇ ಇದ್ದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜೀದ್ ಅವರುಗಳು ಅವಾಚ್ಯ ಶಬ್ದಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ರೇಗಿಸಿದ್ದಾರೆ. ಬಳಿಕ ಕೊಠಡಿ ಬಾಗಿಲನ್ನು ಮುಚ್ಚಿ ಕಿರಿಯ ವಿದ್ಯಾರ್ಥಿಗೆ ಹಾಡಲು ಮತ್ತು ನೃತ್ಯ ಮಾಡಲು ಹೇಳಿದ್ದಾರೆ. ಇದಕ್ಕೆ ಕಿರಿಯ ವಿದ್ಯಾರ್ಥಿ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿರೋಧ ಒಡ್ಡಿದಾಗ ಹಿರಿಯ ವಿದ್ಯಾರ್ಥಿಗಳಾದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜಿದ್ ಆತನ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ.
ನಂತರ ಸಹ ವಿದ್ಯಾರ್ಥಿಗಳು ಕೊಠಡಿಗೆ ಬಂದು ಇಲ್ಲಿ ನಡೆದ ವಿಷಯವನ್ನು ಕಾಲೇಜು ಮಂಡಳಿ ಹಾಗೂ ಪೊಲೀಸರಿಗೆ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಮನೆಗೆ ಬಂದ ಕಿರಿಯ ವಿದ್ಯಾರ್ಥಿ ಭಯದಿಂದ ಯಾರ ಬಳಿಯೂ ಈ ವಿಷಯವನ್ನು ಹಂಚಿಕೊಂಡಿರಲಿಲ್ಲ.
ಮರುದಿನ ಬೆಳಿಗ್ಗೆ ಎಚ್ಚರವಾದಾಗ ಆತನ ಎಡಕಿವಿಯಲ್ಲಿ ರಕ್ತ ಬಂದಿರುವುದನ್ನು ಕಂಡು ಕಾಲೇಜಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ವಿದ್ಯಾರ್ಥಿ ಕಾಲೇಜಿನ ಡೀನ್ ಹಾಗೂ ಆ್ಯಂಟಿ ರ‍್ಯಾಗಿಂಗ್ ಕಮಿಟಿಗೆ ದೂರು ನೀಡಿದ್ದಾನೆ. ಕಿರಿಯ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.