ಮಂಗಳೂರು: ತುಳುನಾಡ ದೈವಾರಾಧನೆಯು ಸಾವಿರಾರು ವರ್ಷಗಳ ಇತಿಹಾಸ ಇರುವಂತಹದ್ದು, ಈ ದೈವಾರಾಧನೆಯ ಧಾರ್ಮಿಕ ಆಚರಣೆಯಲ್ಲಿ ದೈವನರ್ತನ ಸೇವೆಯನ್ನು ನಾವು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿರುವ ಕೆಲವೊಂದು ವಿಚಾರವಾದಿಗಳು ತುಳುನಾಡಿನ ಧಾರ್ಮಿಕ ಆಚರಣೆಯಾದ ದೈವಾರಾಧನೆಯ ಬಗೆಗೆ ಕೆಟ್ಟದಾಗಿ ಮಾತನಾಡಿ, ದೈವ ನರ್ತನ ಮಾಡುವ ಸಮುದಾಯದವರನ್ನು ಅವಮಾನಿಸಿದ್ದಾರೆ.
ಅಷ್ಟೇ ಅಲ್ಲದೆಈ ವಿಚಾರವಾದಿಗಳು ಮಾಸಾಶನ ನೀಡಬಾರದೆಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ತಪ್ಪು. ನಮ್ಮ ನಾಡಿನ ಧಾರ್ಮಿಕ ನಂಬಿಕೆಯ ಈ ದೈವಾರಾಧನೆಯ ಬಗೆಗೆ ಸಾರ್ವಜನಿಕ ವೇದಿಕೆಗಳಲ್ಲಿ, ಮೆರವಣಿಗೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಮನೆ ಮನೆಗಳ ಮನರಂಜನ ಕಾರ್ಯಕ್ರಮಗಳಲ್ಲಿ ವಿಡಂಬಣಾತ್ಮಕವಾಗಿ ಪ್ರತಿ ಬಿಂಬಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಹಾಗೆಯೇ ಕೀಳು ಅಭಿರುಚಿಯನ್ನು ವ್ಯಕ್ತಪಡಿಸುವ ಮತ್ತು ಧಾರ್ಮಿಕ ನಂಬಿಕೆಯನ್ನು ಅಪಹಾಸ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜರಗಿಸುವರೇ ಸರಕಾರವು ಬಿಗಿ ಕಾನೂನನ್ನು ತರಬೇಕೆಂದು ಮನವಿ ಸಲ್ಲಿಸಿದ್ದಾರೆ
ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿಭಾ ಕಾರಂಜಿಯ ಬಗೆಗೆ ಶಾಲೆಗಳಿಗೆ ಕಳುಹಿಸಿರುವ ಆದೇಶದಲ್ಲಿ ಭೂತದ ಕೋಲ ಎಂಬುದಾಗಿ ನಮೂದಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅವಕಾಶ ಮಾಡಿಕೊಟ್ಟಿದೆ, ಅದನ್ನು ಕೂಡ ಸಾರ್ವಜನಿಕ ಶಿಕ್ಷಣ ಇಲಾಖೆಯು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಪರವನ್ ಸಂಘದ ಡಾ.ರವೀಶ್ ಪಡುಮಲೆ, ಅಧ್ಯಕ್ಷರಾದ ಶ್ರೀ ನಾರಾಯಣ, ಉಪಾಧ್ಯಕ್ಷರಾದ ಸುರೇಶ್ ಮರೋಡಿ, ಜತೆ ಕಾರ್ಯದರ್ಶಿಗಳಾದ ಶ್ರೀ ರಾಜು ಮಾರನಾಡು, ಖಜಾಂಚಿ ಅಶೋಕ್ ಇರುವಾಯಿಲು, ಗೌರವಾಧ್ಯಕ್ಷರುಗಳಾದ ಶ್ರೀ ಬಾಬು ಮಿಜಾರು, ಶ್ರೀ ಶಿವಾನಂದ ಮೂಡಬಿದಿರೆ, ಶ್ರೀ ನಾರಾಯಣ ಗಾಂಧಿನಗರ, ಶ್ರೀ ಚುಕುಡ, ಪದಾಧಿಕಾರಿಗಳಾದ ಯೋಗೇಶ್ ಸಾಣೂರು, ಪ್ರವೀಣ್ ಕಕ್ಕಿಂಜೆ, ರಮೇಶ್ ಮರೋಡಿ ಇನ್ನಿತರ 50ಕ್ಕೂ ಹೆಚ್ಚಿನ ಸದಸ್ಯರುಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *