ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಬಾಂಬ್ ಇಟ್ಟವ ಕರ್ನಾಟಕದ ಮಲೆನಾಡಿನ ವ್ಯಕ್ತಿ ಎಂಬುದು ತಿಳಿದು ಬಂದಿದೆ.
ರಾಜಧಾನಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ಭಾರಿ ಯಶಸ್ಸು ಕಂಡಿದ್ದು, ಕೆಫೆಗೆ ಬಾಂಬ್ ತಂದಿಟ್ಟು ಸ್ಫೋಟಿಸಿದ ವ್ಯಕ್ತಿ ಬಾಂಬ್ ಇಟ್ಟವನು ಮಲೆನಾಡಿನ ತೀರ್ಥಹಳ್ಳಿ ಮೂಲದ ವ್ಯಕ್ತಿ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಆತನು ಪೂರ್ವಯೋಜನೆಯಂತೆ ತಾನು ಕೃತ್ಯ ಎಸಗಿದ ಬಳಿಕ ಬಸ್ಸಿನಲ್ಲೇ ಹೊರರಾಜ್ಯಕ್ಕೆ ಪರಾರಿಯಾಗಿದ್ದಾನೆ. ಸದ್ಯ ಆಂಧ್ರಪ್ರದೇಶದ ತಿರುಪತಿ ಅಥವಾ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನಲ್ಲಿ ಆತನ ಇರುವಿಕೆ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶಂಕಿತನ ಗುರುತು ಸಿಕ್ಕಿದ ಬೆನ್ನಲ್ಲೇ ಆತನ ಸಂಪರ್ಕ ಜಾಲ ಭೇದಿಸಲು ದೂರವಾಣಿ ಕರೆಗಳ (ಸಿಡಿಆರ್) ಪರಿಶೀಲನೆ ಕಾರ್ಯವನ್ನು ತನಿಖಾ ಸಂಸ್ಥೆಗಳು ಆರಂಭಿಸಿವೆ ಎನ್ನಲಾಗಿದೆ.
ಅಚ್ಚರಿ ಅಂದರೆ ಈತನಿಗೂ ಮಂಗಳೂರು ಕುಕ್ಕರ್ ಸ್ಪೋಟ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಫೋಟ, ಶಿವಮೊಗ್ಗದ ತುಂಗಾ ತೀರದ ಟ್ರಯಲ್ ಬ್ಲಾಸ್ಟ್ ಗೂ ಸಂಬಂಧವಿದೆ ಎಂದು ಹೇಳಲಾಗಿದೆ. ಹೀಗಾಗಿ ಶಿವಮೊಗ್ಗ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಪ್ರಮುಖ ಹ್ಯಾಂಡ್ಲರ್‌ಗಳೇ ಕೆಫೆ ಕೃತ್ಯದಲ್ಲಿ ಪಾತ್ರವಹಿಸಿರುವ ಶಂಕೆ ವ್ಯಕ್ತವಾಗಿದೆ.