ಬಳ್ಳಾರಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಬಳ್ಳಾರಿ ಮೂಲದ ಶಬ್ಬೀರ್ ನನ್ನು ಎನ್ಐಎ ತಂಡ ವಶಕ್ಕೆ ಪಡೆದಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ರಾಮೇಶ್ವರಂ ಬಾಂಬ್ ಪ್ರಕರಣಕ್ಕೂ ಯುವಕನಿಗೂ ಲಿಂಕ್ ಇರುವ ಅನುಮಾನದ ಮೇಲೆ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಎನ್ಐಎ ವಶಕ್ಕೆ ಪಡೆದ ಶಬ್ಬೀರ್, ತೋರಣಗಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬುಡಾ ಕಾಂಪ್ಲೆಕ್ಸ್ ಬಳಿ ಶಂಕಿತ ಉಗ್ರನನ್ನು ಭೇಟಿಯಾಗಿದ್ದ. ಹಾಗೂ ಶಬ್ಬೀರ್, ಶಂಕಿತನನ್ನು ಫೋನ್ ಮೂಲಕ ಸಂಪರ್ಕ ಮಾಡಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಎಲ್ಲಾ ಅನುಮಾನದ ಮೇಲೆ ಎನ್‌ಐಎ ಅಧಿಕಾರಿಗಳು ಶಬ್ಬೀರ್ ನನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ NIA ಘೋಷಣೆ ಮಾಡಿದೆ.