ಮಂಗಳೂರು: ತುಳುಚಿತ್ರರಂಗ ಹಾಗೂ ನಾಟಕ ರಂಗದ ಜನಪ್ರಿಯ ಕಲಾವಿದ ನವೀನ್ ಡಿ. ಪಡೀಲ್ ಅವರು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ವಾರ್ಷಿಕವಾಗಿ ನೀಡುವ ರಂಗಭಾಸ್ಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ ಮಾಹಿತಿ ನೀಡಿದ್ದಾರೆ. ನಗರದ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಮೇ 3ರಂದು ಸಂಜೆ 5:30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಚಲನಚಿತ್ರ, ರಂಗಭೂಮಿ, ಕಿರುತೆರೆಯಲ್ಲಿ ನವೀನ್ ಪಡೀಲ್ ಸಾಧಿಸಿರುವ ಸಾಧನೆಯನ್ನು ಪರಿಗಣಿಸಿ ಸಾಹಿತಿ ನಾ. ದಾಮೋದರ ಶೆಟ್ಟಿ ನೇತೃತ್ವದ ಆಯ್ಕೆ ಸಮಿತಿ ಈ ಆಯ್ಕೆ ಮಾಡಿದೆ. ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿಯನ್ನು ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿಸಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಶಶಿರಾಜ್ ಕಾವೂರು ನಿರ್ದೇಶನದ ನೆಮ್ಮದಿ ಅಪಾರ್ಟ್ ಮೆಂಟ್ ಬ್ಲಾಕ್ ಬಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
ರಂಗಸಂಗಾತಿ ಸದಸ್ಯರಾದ ಸುರೇಶ್ ಬೆಳ್ಚಡ ಕೊಳಂಬೆ, ಚಂದ್ರಶೇಖರ ಕೂಳೂರು, ರಂಜನ್ ಬೋಳೂರು ಮತ್ತಿತರರು ಉಪಸ್ಥಿತರಿದ್ದರು.