ಕೋಟ: 61ರ ಹರೆಯದ ವಿಕಲ ಚೇತನನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅ.12ರಂದು ಘಟನೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಕೋಟ ಪಡುಕೆರೆ ನಿವಾಸಿ, ವಿಕಲ ಚೇತನ ರಮಾನಂದ ಐತಾಳ್ (61) ಅತ್ಯಾಚಾರ ಎಸಗಿದ ಆರೋಪಿ. ಯುವತಿಯ ಸಂಬಂಧಿಯಾಗಿರುವ ಆರೋಪಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಅ.12ರಂದು ವಿಜಯ ದಶಮಿ ಹಿನ್ನೆಲೆಯಲ್ಲಿಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಿಕ್ಷಾದಲ್ಲಿ ಮನೆಗೆ ಬಂದಿದ್ದ ರಮಾನಂದ ಸಂತ್ರಸ್ತೆಯಲ್ಲಿ ನೀರು ಕೇಳಿದ್ದು, ನೀರನ್ನು ನೀಡುವ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಆರೋಪಿ ವಿವಾಹತನಾಗಿದ್ದು ಆಗಾಗ್ಗೆ ಅಸಭ್ಯ ವರ್ತನೆ ತೋರುತ್ತಿದ್ದ. ಈ ಹಿಂದೆಯೂ ಎರಡು ಬಾರಿ ಯಾರೂ ಇಲ್ಲದ ಸಂದರ್ಭ ಇದೇ ರೀತಿ ಕೃತ್ಯ ಎಸಗಿದ್ದ ಎನ್ನಲಾಗಿದೆ. ಆದರೆ ಆತನ ಬೆದರಿಕೆಗೆ ಹೆದರಿ ಯುವತಿ ಸುಮ್ಮನಾಗಿದ್ದಳು. ಆದರೆ ಶನಿವಾರ ಧೈರ್ಯ ಮಾಡಿ ಆಕೆಯ ಫೋನಿನ್ಲಿ ಪೊಲೀಸ್ ಎಂದು ಇದ್ದ 112 ದೂರವಾಣಿ ಸಂಖ್ಯೆಗೆ ಫೋನ್ ಮಾಡಿ ಅತ್ಯಾಚಾರ ನಡೆದ ಬಗ್ಗೆ ದೂರು ನೀಡಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.