ಸಿಲಿಗುರಿ: ಸಿಕ್ಕಿಂನ ಮಾಜಿ ಉಪಸಭಾಪತಿ ರಾಮಚಂದ್ರ ಪೌಡ್ಯಾಲ್ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ 9 ದಿನಗಳ ಬಳಿಕ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯ ಬಳಿ ಅವರ ಮೃತದೇಹ ಕಾಲುವೆಯಲ್ಲಿ ಹರಿದುಬಂದಿದೆ.
ಸಿಲಿಗುರಿಯ ಫೂಲ್ಬರಿ ತೀಸ್ತಾ ಕಾಲುವೆಯಲ್ಲಿ 80 ವರ್ಷದ ಪೌಡ್ಯಾಲ್ ಅವರ ಶವ ತೇಲಿಬಂದಿದೆ. ಕೈಗೆ ಕಟ್ಟಿದ್ದ ವಾಚ್ ಮತ್ತು ಧರಿಸಿದ್ದ ಬಟ್ಟೆಯಿಂದ ಶವವನ್ನು ಗುರುತಿಸಲಾಗಿದೆ. ಜು. 7ರಂದು ಪಾಕ್ಯೋಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‌ನಿಂದ ಪೌಡ್ಯಾಲ್ ನಾಪತ್ತೆಯಾಗಿದ್ದರು. ಅವರ ಹುಡುಕಾಟಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.
ಪೌಡ್ಯಾಲ್ ಮೊದಲ ಸಿಕ್ಕಿಂ ಉಪಸಭಾಪತಿಯಾಗಿದ್ದರು. ನಂತರ ಅರಣ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಅವರ ಸಾವಿನ ಕುರಿತಂತೆ ಚರ್ಚೆಗಳು ನಡೆದಿವೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
