ಕಾರಣಿಕ ಪ್ರಸಿದ್ಧ ಕಲ್ಲುರ್ಟಿ ದೈವಸ್ಥಾನ ೨೩ ಸಾವಿರಕ್ಕೂ ಮಿಕ್ಕಿ ಕೋಲ ಬುಕ್ಕಿಂಗ್ ವಾರಕ್ಕೆ ೪೦ ಕೋಲ, ೧೦ ಸಾವಿರ ಅಗೇಲು ಸೇವೆ

0
554


ಬಂಟ್ವಾಳ: ಜಿಲ್ಲೆಯಲ್ಲೇ ಗರಿಷ್ಟ ಆದಾಯ ತಂದು ಕೊಡುತ್ತಿರುವ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಸುಮಾರು ೨೩ ಸಾವಿರಕ್ಕೂ ಮಿಕ್ಕಿ ಕೋಲ ಸೇವೆ ಭಕ್ತರು ಮುಂಗಡ ಕಾದಿರಿಸಿದ್ದು, ವಾರದಲ್ಲಿ ಸುಮಾರು ೪೦ ಕೋಲ ಮತ್ತು ೧೦ ಸಾವಿರಕ್ಕೂ ಮಿಕ್ಕಿ ಅಗೇಲು ಸೇವೆ ನಡೆಯುತ್ತಿದೆ.
ವಾರದಲ್ಲಿ ೫ ದಿನ ಮಾತ್ರ ಕೋಲ ಸೇವೆ ಮತ್ತು ಮೂರು ದಿನ ಮಾತ್ರ ಅಗೇಲು ಸೇವೆ ನಡೆಯುತ್ತಿದೆ. ಈ ಹಿಂದೆ ದಿನಕ್ಕೆ ೪ ಕೋಲ ಮಾತ್ರ ಸಂಜೆ ನಡೆಯುತ್ತಿದ್ದು, ದೈವದ ಒಪ್ಪಿಗೆ ಪಡೆದು ಮೇ.೩ರಿಂದ ದಿನಕ್ಕೆ ೮ ಕೋಲ ಸೇವೆ ಆರಂಭಗೊಂಡಿದೆ.
ಸೋಮವಾರ ಮತ್ತು ಶನಿವಾರ ಹೊರತುಪಡಿಸಿ ವಾರದಲ್ಲಿ ೫ ದಿನ ಕೋಲ ಸೇವೆಗೆ ಅವಕಾಶವಿದ್ದು, ಆಟಿ ತಿಂಗಳು, ಅಮಾವಾಸ್ಯೆ, ಷಷ್ಠಿ, ಸಜಿಪ ಮಾಗಣೆ ಜಾತ್ರೆ, ಉತ್ಸವ ಮತ್ತಿತರ ವಿಶೇಷ ಸಂದರ್ಭದಲ್ಲಿ ಕೊಲ ಸೇವೆ ಇರುವುದಿಲ್ಲ.
ಗರಿಷ್ಟ ಅಗೇಲು ಸೇವೆ:
ಪ್ರತೀ ವರ್ಷ ಮೇ. ತಿಂಗಳು ಶಾಲಾ ಕಾಲೇಜಿಗೆ ರಜೆ ಇರುವ ಹಿನ್ನೆಲೆಯಲ್ಲಿ ದಿನವೊಂದಕ್ಕೆ ೫ ಸಾವಿರಕ್ಕೂ ಮಿಕ್ಕಿ ಅಗೇಲು ಸೇವೆ ನೀಡಿರುವ ದಾಖಲೆ ಇದೆ. ಈ ವರ್ಷದ ಕಳೆದ ಭಾನುವಾರ ಒಟ್ಟು ೩,೬೬೬ ಅಗೇಲು ಸೇವೆ ಸಲ್ಲಿಕೆಯಾಗಿದೆ.
ಮುಂಬೈ, ಬೆಂಗಳೂರು ಮತ್ತಿತರ ಕಡೆಗಳಿಂದ ಭಕ್ತರು ಬಂದು ಅಗೇಲು ಸೇವೆ ನೀಡುತ್ತಿದ್ದು, ಇಲ್ಲಿ ಕೋಳಿ ಸಹಿತ ಅಕ್ಕಿ, ಬಾಳೆ ಎಲೆ ಮತ್ತಿತರ ವಸ್ತುಗಳನ್ನು ಸಮರ್ಪಿಸುವ ಮೂಲಕ ಅಗೇಲು ಸೇವೆ ನೀಡಲಾಗುತ್ತದೆ. ಇದೇ ವೇಳೆ ಪ್ರತೀ ಭಕ್ತರ ಸಮ್ಮುಖದಲ್ಲಿ ಅಲ್ಲಿನ ಕುಲಾಲ ಸಮುದಾಯದ ಅರ್ಚಕರು ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಶೇಷ ಪ್ರಸಾದ ರೂಪದಲ್ಲಿ ಅನ್ನ ಮತ್ತು ಕೋಳಿ ಪದಾರ್ಥ ವಿತರಣೆ ನಡೆಯುತ್ತಿದೆ.
ಇಲ್ಲಿನ ತೀರಾ ಕಿರಿದಾದ ರಸ್ತೆ ವಾಹನ ಸಂಚಾರಕ್ಕೆ ತೊಡಕಾಗಿದ್ದು, ಸುಸಜ್ಜಿತ ಶೌಚಾಲಯ ಸಹಿತ ಹಂತ ಹಂತವಾಗಿ ವಿವಿಧ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ . ಈಗಾಗಲೇ ನೂತನ ಅನ್ನಛತ್ರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸ್ಥಳೀಯ ಭಕ್ತರು ತಿಳಿಸಿದ್ದಾರೆ.

ಕಲ್ಲುರ್ಟಿ ಮತ್ತು ಭಕ್ತರ ನಡುವೆ ತಾಯಿ-ಮಕ್ಕಳ ನಡುವಿನ ಅವಿನಭಾವ ಸಂಬಂಧವಿದ್ದು, ಎಲ್ಲವೂ ಇಲ್ಲಿನ ಕಲ್ಲುರ್ಟಿ ಮಾತೆಯ ಆಣತಿಯಂತೆ ಭಕ್ತರ ಅಭೀಷ್ಟಗಳು ನೆರವೇರುತ್ತಿದೆ ಎಂದು ದೈವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ದಿವಾಕರ ಮುಗುಳ್ಯ ಪ್ರತಿಕ್ರಿಯಿಸಿದ್ದಾರೆ. -ಮೋಹನ್ ಕೆ.ಶ್ರೀಯಾನ್ ರಾಯಿ

LEAVE A REPLY

Please enter your comment!
Please enter your name here