ಬೆಂಗಳೂರು :ಬಾಡಿಗೆ ಮನೆಯಲ್ಲಿ ವಾಸವಿದ್ದಾಕೆ ಮೊನ್ನೆ ಅಳುತ್ತಲೇ ಮನೆಯಿಂದ ಹೊರ ಬಂದಿದ್ದಳು. ಅಕ್ಕ ಪಕ್ಕದ ಮನೆಯವರು ಪಾಪ ಈ ಹುಡ್ಗಿಗೆ ಏನಾಯ್ತು ಅಂತ ಕೇಳಿದ್ರು. ಏನಿಲ್ಲಾ ಅಂತ ಮೊಸಳೆ ಕಣ್ಣೀರು ಹಾಕಿದ್ದವಳು, ಎಂತಹ ಖತರ್ನಾಕ್ ಅಂತ ಗೊತ್ತಾಗಿದ್ದೇ ಪೊಲೀಸರು ಅರೆಸ್ಟ್ ಮಾಡಿದ ಮೇಲೆ!
ಈ ಯುವತಿ ಹೆಸರು ಮೋನಿಕಾ (24). ಮೇ 10ನೇ ತಾರೀಖು ತಾನು ಬಾಡಿಗೆಗೆ ಇದ್ದ ಮನೆಯ ಓನರ್ ದಿವ್ಯಾ (35) ಎಂಬ ಮಹಿಳೆಯನ್ನ ಕೊಲೆ ಮಾಡಿದ್ದಳು. ಇದೀಗ, ಈಕೆಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಎರಡೂವರೆ ತಿಂಗಳಷ್ಟೇ ಈ ಮನೆಗೆ ಬಾಡಿಗೆಗೆ ಅಂತ ಸೇರಿಕೊಂಡಿದ್ದಳು. ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ನಂತರ ಶೋಕಿ ಜೀವನಕ್ಕೆ ಬಿದ್ದಿದ್ದಾಕೆ ಓರ್ವ ಯುವಕನನ್ನ ಗಂಡ ಅಂತ ಪರಿಚಯ ಮಾಡಿಕೊಂಡಿದ್ದಳು. ಕೈ ತುಂಬಾ ಸಾಲ ಮಾಡಿಕೊಂಡಿದ್ದಳು. ಸಾಲ ತೀರಿಸಲು ಮುಂದಾಗಿದ್ದ ಈಕೆ ಫೇಸ್ ಪ್ಯಾಕ್ ಹಾಕೋ ನೆಪದಲ್ಲಿ ಓನರ್ ದಿವ್ಯಾರನ್ನ ಕೊಲೆಗೈದು, ಕೊರಳಲ್ಲಿದ್ದ 35 ಗ್ರಾಂ ಚಿನ್ನದ ಸಮೇತ ಎಸ್ಕೇಪ್ ಆಗಿದ್ದಳು.
ಇನ್ನು ಕೊಲೆ ಮಾಡಿ ಹೊರ ಬಂದಿದ್ದ ಆಕೆ ತನಗೇನು ಗೊತ್ತಿಲ್ಲ ಎಂಬುವಂತೆ ನಾಟಕವಾಡಿದ್ದಳು. ಅವತ್ತು ಅತ್ತುಕೊಂಡೇ ಹೊರ ಬಂದಿದ್ದಾಕೆಯನ್ನ ಇದೇ ಏರಿಯಾದವರು ಪಾಪ ಹುಡ್ಗಿ ಯಾಕೋ ಅಳ್ತಾಳೆ ಅಂತ ವಿಚಾರಿಸಿದ್ರು. ಆದ್ರೆ, ನನ್ ವಿಷ್ಯ ನಿಂಗ್ಯಾಕೆ ಅಂತ ಪ್ರಶ್ನೆ ಮಾಡಿದ್ದ ಮೋನಿಕಾ, ಚಿನ್ನದ ಸರವನ್ನು 85 ಸಾವಿರಕ್ಕೆ ಅಡ ಇಟ್ಟಿದ್ದಳು. ಸಾಲ ತೀರಿಸಕೊಳ್ಳೋಕೆ ಮುಂದಾಗಿದ್ದಳು.
ಇನ್ನು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈಕೆಯನ್ನೂ ವಿಚಾರಣೆ ನಡೆಸಿದ್ದರು. ಆದ್ರೆ, ಬಾಯಿಬಿಡಲಿಲ್ಲ. ತಮ್ಮ ಸ್ಟೈಲ್ನಲ್ಲಿ ವಿಚಾರಿಸಿದಾಗ ಪೊಲೀಸರ ಮುಂದೆ ನಿಜ ಒಪ್ಕಿಂಡಿದ್ದಾಳೆ. ಸದ್ಯ ಆರೋಪಿಯನ್ನ ಬಂಧಿಸಿರೋ ಕೆಂಗೇರಿ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಇವಳೊಬ್ಬಳೇ ಕೊಲೆ ಮಾಡಿದ್ದಾ ಅಥವಾ ಇದರ ಹಿಂದೆ ಯಾರಾದ್ರು ಇದ್ದಾರಾ? ಅನ್ನೋದು ತನಿಖೆ ನಂತರವೇ ಗೊತ್ತಾಗಬೇಕಿದೆ.