ರಾಯಗಢ: ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ಫೇಮಸ್ ಆಗಿದ್ದ ಮುಂಬೈ ನಿವಾಸಿ ಯುವತಿಯೊಬ್ಬಳು ಜಲಪಾತವೊಂದರಲ್ಲಿ ರೀಲ್ಸ್ ಮಾಡುತ್ತಿರುವಾಗ ಆಯತಪ್ಪಿ 300 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ. ಮುಂಬೈ ನಿವಾಸಿ ಅನ್ವಿ ಕಾಮ್ದಾರ್ ಮೃತ ದುರ್ದೈವಿ. ರಾಯಗಢ ಬಳಿಯ ಕುಂಬೆ ಜಲಪಾತದಲ್ಲಿ ರೀಲ್ಸ್ ಮಾಡುವ ವೇಳೆ ಅನ್ವಿ ಆಯ ತಪ್ಪಿ ಕೆಳಗೆ ಬಿದ್ದಳೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಜು. 16ರಂದು ಅನ್ವಿ ತನ್ನ ಏಳು ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸವನ್ನು ಕೈಗೊಂಡಿದ್ದಳು. ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ವಿಡಿಯೊ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದಿದ್ದಾಳೆ. ವಿಷಯ ತಿಳಿದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. 300-350 ಅಡಿ ಆಳಕ್ಕೆ ಬಿದ್ದಿದ್ದುದರಿಂದ ಮತ್ತು ಧಾರಾಕಾರ ಮಳೆ ಸುರಿಯುತ್ತಿದ್ದುದರಿಂದ ತಕ್ಷಣವೇ ಆಕೆಯನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಸತತ ಆರು ಗಂಟೆಗಳ ಕಾರ್ಯಾಚರಣೆಯ ಬಳಿಕ ಆಕೆಯನ್ನು ಮೇಲಕ್ಕೆ ಕರೆ ತರಲಾಯಿತು. ತಕ್ಷಣವೇ ಆಕೆಯನ್ನು ಮನಗಾಂವ್ ಉಪ ಜಿಲ್ಲಾಸ್ಪತ್ರೆಗೆ ಕರೆತಂದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಮೂಲ್ಕಿ ಬಗ್ಗೆ ಉಲ್ಲೇಖ: ಅನ್ವಿ ಕಾಮ್ದಾರ್ ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಸ್ಥಳಗಳ ಬಗ್ಗೆ ಪೋಸ್ಟ್ ಒಂದರಲ್ಲಿ ಪಟ್ಟಿ ನೀಡಿದ್ದು, ಅದರಲ್ಲಿ ಮೂಲ್ಕಿಯ ಉಲ್ಲೇಖ ಮಾಡಿದ್ದಾಳೆ. ʻʻಮೂಲ್ಕಿ (ಕೇರಳ ಅಲ್ಲ, ಕರ್ನಾಟಕ): ಮೂಲ್ಕಿ ಹೋಂ ಸ್ಟೇ, ಹಾಸ್ಟೆಲ್‌ಗಳು ಮತ್ತು ಸರ್ಫ್ ಸ್ಕೂಲ್‌ಗೆ ಖ್ಯಾತಿಯಾದುದು. ಮಳೆಯಾದುದರಿಂದ ಬೀಚ್‌ಗೆ ಪ್ರವೇಶವಿರಲಿಕ್ಕಿಲ್ಲ. ಆದರೆ ಇಲ್ಲಿನ ಹಸಿರುಮಯ ವಾತಾವರಣ ಸುಂದರವಾದುದುʼʼ ಎಂದು ಅನ್ವಿ ಉಲ್ಲೇಖಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚಿಗೆ ಸಾಕಷ್ಟು ಮಂದಿ ಬಲಿಯಾಗಿದ್ದರೂ, ಯುವ ಸಮುದಾಯ ಮಾತ್ರ ಕೇಳುತ್ತಲೇ ಇಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಸ್ಟಂಟ್ ಮಾಡಲು ಹೋಗಿ ತಮ್ಮ ಪ್ರಾಣಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ.
ಅನ್ವಿ ಕಾಮ್ದಾರ್ ಇನ್‌ಸ್ಟಾಗ್ರಾಮ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ….