ಅಸಹಾಯಕ ವೃದ್ಧೆಗೆ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ

0
44

ಉದ್ಯಾವರ : ವಯೋಸಹಜ ಕಾಯಿಲೆಯಿಂದ ಬಳಲುತ್ತಾ, ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಅಸಹಾಯಕ ವೃದ್ಧೆಯನ್ನು ರಕ್ಷಿಸಿ, ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ವೃದ್ಧಾಪ್ಯ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧೆ, ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಜೀವನ ನಿರ್ವಹಣೆಗೂ ತೀವ್ರ ತೊಂದರೆ ಅನುಭವಿಸುತ್ತಿದ್ದರು. ದೈನಂದಿನ ಬದುಕು ಸಾಗಿಸಲು ಕಷ್ಟಪಡುತ್ತಿದ್ದ ವೃದ್ಧೆಯ ಅಸಹಾಯಕ ಸ್ಥಿತಿಯ ಕುರಿತು ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ತಕ್ಷಣ ಸ್ಪಂದಿಸಿ ನೆರವಿಗೆ ಧಾವಿಸಿದರು.

ವೃದ್ಧೆಯನ್ನು ಸುರಕ್ಷಿತವಾಗಿ ಆಶ್ರಮಕ್ಕೆ ದಾಖಲಿಸುವ ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಿದರು. ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ್ ಅವರು ವೃದ್ಧೆಗೆ ಆಶ್ರಯ ಒದಗಿಸುವ ಮೂಲಕ ಮಾನವೀಯತೆ ಮೆರೆದರು.

ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಗೆ ಆಸರೆಯಾಗಿ ನಿಂತ ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಆಶ್ರಮದ ಸಂಚಾಲಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಂಕಷ್ಟದಲ್ಲಿರುವ ಹಿರಿಯ ಜೀವಗಳಿಗೆ ನೆರವು ನೀಡುವ ಇಂತಹ ಮಾನವೀಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ.