ಕನ್ನಡ ಭವನ ಕಾಸರಗೋಡು ಸಭಾಂಗಣದಲ್ಲಿ ನಿನ್ನೆ ಎರಡು ಕಾರ್ಯಕ್ರಮ. ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅಜಾತಶತ್ರು ಕಳ್ಳಿಗೆ ಮಹಾಬಲ ಭಂಡಾರಿ ಅವರ ಸಂಸ್ಮರಣೆ. ಅದಾಗಿ ನಿರೀಕ್ಷೆ ಇರದ ಮತ್ತೊಂದು ಸಮಾರಂಭ…
ಪರಿಷತ್ತಿನ ಅಧ್ಯಕ್ಷ ಡಾ ಜಯಪ್ರಕಾಶ ನಾರಾಯಣರ ಅಧ್ಯಕ್ಷತೆ. ಪೈಗಳ ತಾಯೆಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಎಂಬ ಕವಿತೆಯನ್ನು ಅತ್ಯಂತ ಮನೋಜ್ಞವಾಗಿ ಹಾಡಿದ ಶೇಖರ ಶೆಟ್ಟಿ ಅವರಿಂದ ತೊಡಗಿ ವಿಶಾಲಾಕ್ಷರ ನಿರ್ವಹಣೆ, ಸುಕುಮಾರ ಆಲಂಪಾಡಿ, ಟಿ. ಶಂಕರನಾರಾಯಣ ಭಟ್ ಮುಂತಾದವರ ಮಾತುಕತೆಗಳಿಂದ ಅನೇಕ ಗಣ್ಯರ ಉಪಸ್ಥಿತಿ ಇರುವಲ್ಲಿ ಶ್ರೀ ರಾಧಾಕೃಷ್ಣ ಉಳಿಯತ್ತಡ್ಕರು ಕಳ್ಳಿಗೆ ಮಹಾಬಲ ಭಂಡಾರಿ ಅವರನ್ನು ಸ್ಮರಿಸಿ ಗೌರವವನ್ನು ಸಲ್ಲಿಸಿದರು.
ಕಳ್ಳಿಗೆಯವರು ಮನುಷ್ಯನ ಅರ್ಧಾಯುಷ್ಯ ತಲುಪದಿದ್ದೂ ಅಷ್ಟರೊಳಗೆ ಮುಂಚೂಣಿಯ ಕ್ರಿಮಿನಲ್, ಸಿವಿಲ್ ವಕಾಲತ್ತು, ಮೂರು ಮುಖ್ಯ ಕಾದಂಬರಿಗಳನ್ನು ಕೊಡುವ ಮೂಲಕ ಸಾಹಿತ್ಯ ಸಾಧನೆ, ಮೂರು ಬಾರಿ ಶಾಸಕನಾಗಿ ಜನಸೇವೆ, ಕನ್ನಡದ ಅಸ್ಮಿತೆಗೆ ಏಟು ಬಿದ್ದಾಗಲೆಲ್ಲ ಸಮರ್ಥವಾಗಿ ಎದುರಿಸಿ ಇಲ್ಲಿನ ಜನಜೀವನಕ್ಕೆ ಕೊಟ್ಟ ರಾಜಕೀಯ ಶಿಕ್ಷಣ..ಮುಂತಾಗಿ ಹಂತ ಹಂತವಾಗಿ ವಿಶ್ಲೇಷಿಸಿ ಯಾಕೆ ಇಷ್ಟೆಲ್ಲ ಕಾಲ ಸಂದೂ ಪ್ರಾತಃ ಸ್ಮರಣೀಯರೆಂಬುದನ್ನು ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು ಮನದಟ್ಟು ಮಾಡಿ ಕೊಟ್ಟರು.
ಕನ್ನಡ ಭವನದ ವಾಮನರಾವ್ ಅವರಿಗೆ ತನ್ನ ಜ್ಯೋತಿಷ ವಿಷಯಕ ಅಮೂಲ್ಯ ಕೃತಿಗಳನ್ನು ಅರ್ಪಿಸುವ ಮೂಲಕ ಶ್ರೀ ಸುಕುಮಾರ ಆಲಂಪಾಡಿ ಸಭೆಗೆ ಹೆಚ್ಚು ಪರಿಚಯವಾದರು.
ಇತ್ತೀಚಿನ ಜ್ಯೋತಿಷ ಪಾರಿಭಾಷಿಕ ಪದಕೋಶವಂತೂ ಗಾತ್ರ ಮತ್ತು ಒಳ ತಿರುಳಿನ ದೃಷ್ಟಿಯಲ್ಲಿ ಕನ್ನಡ ಲೋಕಕ್ಕೇ ಅತ್ಯಮೂಲ್ಯ ಅನಿಸಬಹುದಾದ ಕೃತಿ. ಅವರ ಜ್ಯೋತಿಷ ವಿಷಯಕ ಕೃತಿಗಳೆಲ್ಲ ವಿಷಯ ಬಲ್ಲ ಕನ್ನಡ ಪರಿಸರಕ್ಕೆ ತುಂಬ ಪ್ರಿಯವಾದಂಥವು. ಸೀಮೆಯೊಳಗಿದ್ದೂ ದಾಟಿದ ಇಂತಹ ಸರಳ ವ್ಯಕ್ತಿತ್ವದ ಮೇಧಾವಿ ಅಖಿಲ ಕರ್ನಾಟಕಕ್ಕೆ ಪರಿಚಯವಾಗಬೇಕಿತ್ತು ಎಂದು ನಾವೆಲ್ಲ ಭಾವಿಸುತ್ತಿರುವಂತೆಯೇ ಅವರ ಕೃತಿಗಳು ಮತ್ತೆ ಮತ್ತೆ ಮುದ್ರಣ ಹೊಂದಿ ಸಲ್ಲಬೇಕಾದಲ್ಲಿ ಜನಜನಿತವಾಗಿಬಿಟ್ಟಿವೆ. ಆ ಮಟ್ಟಿಗೆ ನಾವಿನ್ನೂ ಹಿತ್ತಿಲಲ್ಲಿದ್ದೇವೆ!! ಒಂದಂತೂ ಐದನೇ ಮುದ್ರಣ ಕಂಡಿದೆ !!
ಇದೇ ಸಭೆಯಲ್ಲಿ ಕನ್ನಡ ಭವನದ ರೂವಾರಿ ದಂಪತಿಗೆ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವವನ್ನು ಅರ್ಪಿಸಲಾಯಿತು. ಒಳ್ಳೆಯ ಉಪಹಾರೋಪಚಾರ ಸಹಿತ ಆಗಂತುಕರನ್ನು ತಣಿಸಿದ ವಾಮನ ರಾವ್ ಬೇಕಲ್ ಅವರಿಗೆ ಡಾ. ಸುಷ್ಮಾ ಶಂಕರ್ ಎಂಬ ಬೆಂಗಳೂರಿನ ಸಾಹಸಿ ಮಹಿಳೆ ಎಲ್ಲಿ ಹೇಗೆ ಪರಿಚಯವಾದರೊ ಗೊತ್ತಿಲ್ಲ. ಡಿ ಬಿ ಟಿ ಎ(ದ್ರಾವಿಡ ಭಾಷಾ ಭಾಷಾಂತರಕಾರರ ಸಂಘ) ಯ ಅಧ್ಯಕ್ಷೆಯೂ ಲೇಖಕಿ, ಅನುವಾದಕಿ, ಮಕ್ಕಳ ಪತ್ರಿಕೆ ತೊದಲ್ನುಡಿಯ ಸಂಪಾದಕಿ ಮತ್ತು ಶಿಕ್ಷಣ ಸಂಸ್ಥೆಯೊಂದರ ಒಡತಿ ಆಗಿರುವ ಆಕೆಯ ಪುಸ್ತಿಕೆಯೊಂದರ ಬಿಡುಗಡೆಯೂ ನಡೆಯಿತು. ಅವರಿಗೆ ಈ ಸಂದರ್ಭದಲ್ಲಿ ಕನ್ನಡ ಭವನದ ವತಿಯಿಂದ “ಪಯಸ್ವಿನಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತನ್ನ 18 ನೇ ವಯಸ್ಸಿಗೆ ಬೆಂಗಳೂರು ಸೇರಿದ ಸುಷ್ಮಾ ಶಂಕರ್ ಅಲ್ಲೇ ಕನ್ನಡ ಕಲಿತು ಎಂ ಎ ಮುಗಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ 19 ಕಾದಂಬರಿಗಳ ಅಧ್ಯಯನಕ್ಕೆ ಡಾಕ್ಟರೇಟ್ ಪಡೆದವರು. ಅವರು ಇಡಶ್ಶೇರಿ ಗೋವಿಂದನ್ ನಾಯರ್ ಎಂಬ ಮಲೆಯಾಳದ ಆಧುನಿಕ ಮಹಾಕವಿಯ ಪೂತಪ್ಪಾಟ್ಟ್ ಎಂಬ ಕಥನ ಕವನವನ್ನು ತಿಳಿಗನ್ನಡಕ್ಕೆ ಅನುವಾದಿಸಿದ್ದಾರೆ. ಸುಮಾರು ಇನ್ನೂರೈವತ್ತು ಸಾಲುಗಳಿರುವ ನೀಳ್ಗವನ ಖಂಡಕಾವ್ಯವೆಂಬ ಅಂಕಿತಕ್ಕೆ ತಕ್ಕುದಲ್ಲ. ಮುನ್ನುಡಿಯಲ್ಲಿ ದೊಡ್ಡರಂಗೇಗೌಡರು ಕಥನ ಕವನ ಎಂದು ನಮೂದಿಸಿರುವುದು ಸರಿಯಾಗಿದೆ.