ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ‍್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ರಾಜ್ಯಮಟ್ಟದ 22ನೇ ವಾರ್ಷಿಕ ಪ್ರತಿಷ್ಠಿತ “ವಂದನಾ ಪ್ರಶಸ್ತಿ – 2025”ಯನ್ನು ಶುಕ್ರವಾರ 28.03.2025 ರಂದು ಸಂಜೆ 08.00 ಗಂಟೆಗೆ ನಗರದ ಹೊಟೇಲ್ ಮೋತಿ ಮಹಲ್ ಸಭಾಂಗಣದಲ್ಲಿ ಜರಗುವ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ರೋ. ಡಾ. ದೇವದಾಸ್ ರೈಯವರು ಪತ್ರಿಕಾ ಮಾಹಿತಿ ನೀಡಿದ್ದಾರೆ.
ಪ್ರಸ್ತುತ 2025ನೇ ಸಾಲಿನ ಪ್ರಶಸ್ತಿಗೆ ಬೆಂಗಳೂರು ನಗರ ಮೂಲದ ಖ್ಯಾತ ಹೋಟೇಲ್ ಉದ್ಯಮಿ ಹಾಗೂ ಎಂ.ಆರ್.ಜಿ. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿಯವರು ಆತಿಥ್ಯ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಅಮೂಲ್ಯ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಅನುಪಮ ಸೇವೆ ಹಾಗೂ ಮತ್ತು ಸಾಧಿಸಿದ ಗಣನೀಯ ಗಮನಾರ್ಹ ಜೀವಮಾನ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ನಗರದ ಪೋಲಿಸ್ ಆಯುಕ್ತರಾದ ಅನುಪಮ್ ಅಗರ್‌ವಾಲ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ರೋ. ಬ್ರಾಯನ್ ಪಿಂಟೋ ರವರು ಅಧ್ಯಕ್ಷತೆ ವಹಿಸಲಿರುವರು. ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಮೈಸೂರು ನಗರ ಮೂಲದ ರೋ. ಸಂಜಯ್ ಮತ್ತು ವಲಯ ಸಹಾಯ ಗವರ್ನರ್‌ರಾದ ರೋ. ಕೆ.ಎಂ. ಹೆಗ್ಡೆ ಗೌರವ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಳಲಿರುವರು.
ರೋಟರಿ ಮತ್ತು ರೋಟರ‍್ಯಾಕ್ಟ್ ಸಂಸ್ಥೆಯ ಪ್ರತಿಷ್ಠಿತ ವಂದನಾ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ರೀಡೆ, ವಾಣಿಜೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿ ಸೇವೆ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು. ಇದು ರೋಟರಿ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿ ಪ್ರದಾನ ಮಾಡಲಾಗುವುದೆಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿಯಾದ ರೋ. ಡಾ. ದೇವದಾಸ್ ರೈ ಪತ್ರಿಕಾ ಮಾಹಿತಿ ನೀಡಿದ್ದಾರೆ. ರೋಟರಿ ಸಂಸ್ಥೆಯ ಅಧ್ಯಕ್ಷ. ರೋ. ಬ್ರಾಯನ್ ಪಿಂಟೋ ಸ್ವಾಗತಿಸಿದರು, ರೋಟರ‍್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷರಾದ ರೋ ಬಿದ್ದಪ್ಪ ವಂದಿಸಿದರು ಮತ್ತು ಮಾಧ್ಯಮ ಸಲಹೆಗಾರರಾದ ರೋ. ಎಂ.ವಿ. ಮಲ್ಯ, ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಭಾಸ್ಕರ್ ರೈ, ರೋಟರಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಸೀತರಾಮ ಮತ್ತು ರೋಟರ‍್ಯಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಅಕ್ಷಯ್ ಬಿ. ರೈ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.