ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸಹಿತ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷಿಗಳು ಲಭ್ಯವಾಗಿವೆ. ಈ ಸಾಕ್ಷ್ಯಗಳ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ವಿವರಣೆ ನೀಡಲಾಗಿದೆ. ಈ ನಡುವೆ ರೇಣುಕಾಸ್ವಾಮಿ ಕೈ ಮುಗಿದು ಅಂಗಾಲಾಚುತ್ತಿರುವ ಫೋಟೊ ಮಾಧ್ಯಮಗಳಿಗೆ ಲಭ್ಯವಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡುವ ಸಂದರ್ಭ ತೆಗೆದ ಫೋಟೊ ಇದು ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಹತ್ಯೆ ಮಾಡಲಾಗಿತ್ತು. ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿ ಎಷ್ಟೊಂದು ಟಾರ್ಚರ್ ನೀಡಿ ಹತ್ಯೆಗೈದರೆಂಬುದು ಈ ಫೋಟೊಗಳಿಂದಲೇ ಅರ್ಥ ಮಾಡಿಕೊಳ್ಳಬಹುದಾಗಿದೆ. ರೇಣುಕಾಸ್ವಾಮಿ ಕೈ ಮುಗಿದು ಅಂಗಲಾಚುತ್ತಿರುವ ಫೋಟೊ ಮಾತ್ರವಲ್ಲದೆ, ಶವವಾಗಿ ಬಿದ್ದಿರುವ ಫೋಟೊಗಳೂ ಸಿಕ್ಕಿವೆ. ಆರೋಪಿಗಳ ಮೊಬೈಲ್‌ಗಳಲ್ಲಿ ಇದನ್ನು ತೆಗೆಯಲಾಗಿತ್ತು ಮತ್ತು ಬಳಿಕ ಅದನ್ನು ಡಿಲೀಟ್ ಮಾಡಲಾಗಿತ್ತು. ಇದೀಗ ಫೋಟೊಗಳನ್ನು ರಿಟ್ರೀವ್ ಮಾಡಲಾಗಿದ್ದು, ಚಾರ್ಜ್‌ಶೀಟ್‌ನಲ್ಲಿ ಫೋಟೊಗಳನ್ನು ಲಗತ್ತಿಸಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಯನ್ನು ವಿಶೇಷ ಕೋರ್ಟ್‌ಗೆ ನೀಡುವಂತೆ ಮನವಿ ಮಾಡಲು ಪೊಲೀಸರು ಮುಂದಾಗಿದ್ದಾರೆ.