ಬಹರೈನ್ : ಬಹರೈನ್ ದ್ವೀಪ ರಾಷ್ಟ್ರದಲ್ಲಿ ತುಳು ಕಲೆ,ಭಾಷೆ ,ಸಂಸ್ಕ್ರತಿಗೆ ವೇದಿಕೆಯನ್ನು ಕಲ್ಪಿಸಿ ತನ್ಮೂಲಕ ತುಳು ಕಲೆ,ಭಾಷೆ ,ಸಂಸ್ಕ್ರತಿಯನ್ನು ದ್ವೀಪದಲ್ಲಿ ಉಳಿಸಿ ಬೆಳೆಸಲಿಕ್ಕಾಗಿಯೇ ಅಸ್ತಿತ್ವಕ್ಕೆ ಬಂದಿರುವ “ತುಳುಕೂಟ ಬಹರೈನ್ ” ದ್ವೀಪದಲ್ಲಿ ವಿದ್ಯುಕ್ತ ಚಾಲನೆ ಕಂಡಿತು . ದ್ವೀಪರಾಷ್ಟ್ರದಲ್ಲಿ ಸರಿಸುಮಾರು ನಾಲ್ಕು ದಶಕಗಳಿಂದ ಕನ್ನಡ ತುಳು ಭಾಷೆ, ಸಂಸ್ಕೃತಿಯ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ದ್ವೀಪದ ಸಮಾನ ಮನಸ್ಕ ಹಿರಿಯ ಕನ್ನಡಿಗರಾದ ಶ್ರೀ ರಾಜ್ ಕುಮಾರ್, ಶ್ರೀ ಆಸ್ಟಿನ್ ಸಂತೋಷ್, ಶ್ರೀ ವಿಜಯ ನಾಯಕ್, ಹಾಗೂ ಶ್ರೀ ರಾಜೇಶ್ ಶೆಟ್ಟಿಯವರ ನೇತೃತ್ವದಲ್ಲಿ “ತುಳುಕೂಟ ಬಹರೈನ್” ಸೆ.16 ರಂದು ಲೋಕಾರ್ಪಣೆಗೊಂಡಿತು. ನೆರೆದ ಹಿರಿಯರು ಒಂದಾಗಿ ಜ್ಯೋತಿ ಪ್ರಜ್ವಲಿಸುವುದರೊಂದಿಗೆ “ತುಳು ಕೂಟಕ್ಕೆ” ವಿದ್ಯುಕ್ತ ಚಾಲನೆ ನೀಡಿದರು. ಸ್ಥಳೀಯ ಪ್ಯಾಪಿಲಾನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಸರಳ ಸಮಾರಂಭದಲ್ಲಿ ಉತ್ತಮ ಸಂಖ್ಯೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಗಣ್ಯರು ಆಗಮಿಸಿ ಶುಭಕೋರಿದರು.

ಕನ್ನಡ ಸಂಘದ ಮಾಜಿ ಅಧ್ಯಕ್ಷರೂ ಹಾಗೂ ಇಂಡಿಯನ್ ಸ್ಕೂಲ್ ನಲ್ಲಿ 1989 ರಲ್ಲಿ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ಕಾರಣರಾಗಿದ್ದ ಶ್ರೀ ಸುರೇಂದ್ರ ಶೆಟ್ಟಿ, ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಶನ್ ನ ಅಧ್ಯಕ್ಷರಾದ ಹಾಜಿ ಅಬ್ದುಲ್ ರಜಾಕ್, ಬಹರೇನ್ ಬಂಟ್ಸ್ ನ ಮಾಜಿ ಅಧ್ಯಕ್ಷರಾದ ಭರತ್ ಶೆಟ್ಟಿ, ಅಲ್ ಹಿಲಾಲ್ ವೈದ್ಯಕೀಯ ಸಮೂಹ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಆಸೀಫ್, ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಶ್ರೀ ಮೋಹನ್ ದಾಸ್ ರೈ, ವಿಶ್ವಕರ್ಮ ಬಳಗದ ಅಧ್ಯಕ್ಷರಾದ ಶ್ರೀ ಸತೀಶ್ ಉಳ್ಳಾಲ್, ಕೊಂಕಣ್ ಸಿಂಗರ್ಸ್ ನ ಮಾಜಿ ಅಧ್ಯಕ್ಷರಾದ ಶ್ರೀ ವಾಲ್ಟರ್ ನೊರೊನ್ಹಾ, ಹಿರಿಯ ಕನ್ನಡಿಗರಾದ ಶ್ರೀ ಹುಂತ್ರಿಕೆ ಭಾಸ್ಕರ್ ಶೆಟ್ಟಿ, ಶ್ರೀ ಚಂದ್ರಹಾಸ ಐಲ್, ಶ್ರೀ ರಾಬರ್ಟ್ ಡಿ’ ಸೋಜಾ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿ, ಶುಭಹಾರೈಸಿದರು. ಎಡನೀರು ಮಠ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು “ತುಳುಕೂಟ ಬಹರೈನ್” ನ ಸಂಘಟಕರಿಗೆ ಹಾಗೂ ಬಹರೈನ್ ತುಳುವರೆಲ್ಲರಿಗೆ ಶುಭ ಹಾರೈಸಿ ಕಳುಹಿಸಿದ್ದ ಸಂದೇಶ ಹಾಗೂ ಆಶೀರ್ವಚನದ ವಿಡಿಯೋವನ್ನು ಪ್ರಸಾರಮಾಡಲಾಯಿತು .

ತುಳುಕೂಟದ ಚೊಚ್ಚಲ ಕಾರ್ಯಕ್ರಮವಾಗಿ ಮುಂದಿನ ಅಕ್ಟೊಬರ ತಿಂಗಳ 13 ರಂದು ತುಳುನಾಡಿನಲ್ಲಿ ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಹರಿಪ್ರಸಾದ್ ರೈ ನಿರ್ಮಾಣದ , ತ್ರಿಶೂಲ್ ಶೆಟ್ಟಿ ನಿರ್ದೇಶನದ ವಿನೀತ್ ಕುಮಾರ್ ,ಸಮತಾ ಅಮೀನ್ ಮುಖ್ಯ ಭೂಮಿಕೆಯಲ್ಲಿರುವ “ಪುಳಿಮುಂಚಿ” ತುಳು ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಪ್ರದರ್ಶನವನ್ನು ಬಹರೈನ್ ಏರ್ಪಡಿಸಿದ್ದು ಅದರ ಅಂಗವಾಗಿ ಚಿತ್ರದ ಪೋಸ್ಟರ್ ಅನ್ನು ಇದೆ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು . ಕಾರ್ಯಕ್ರಮವನ್ನು ಶ್ರೀ ವಿಜಯ್ ನಾಯಕ್ ರವರು ಅಚ್ಚುಕಟ್ಟಾಗಿ ನಿರೂಪಿಸಿದರೆ ಶ್ರೀ ರಾಜೇಶ್ ಶೆಟ್ಟಿ ಯವರು ಧನ್ಯವಾದ ಸಮರ್ಪಣೆ ಮಾಡಿದರು.